ಬೆಂಗಳೂರು: ನಗರದ ಪ್ರತಿಷ್ಠಿತ ರೆಸಾರ್ಟ್‍ಗಳಲ್ಲೊಂದಾದ ಬೆಸ್ಟ್ ಕ್ಲಬ್ ಮಾಲೀಕರೂ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಬಿಎಂಟಿಎಫ್ ಆರೋಪ ಪಟ್ಟಿ ಸಲ್ಲಿಸಿದೆ. ಸುಮಾರು ರೂ. 300ಕೋಟಿ ಬೆಲೆ ಬಾಳುವ ಸರ್ಕಾರಿ ಗೋಮಾಳವನ್ನು ಕ್ಲಬ್ ಒತ್ತುವರಿ ಮಾಡಿಕೊಂಡಿದೆಯೆಂದು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಬಿಎಂಟಿಎಫ್ ಅಧಿಕಾರಿಗಳು ಕೋರ್ಟ್‍ನಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ ವಡ್ಡರ ಪಾಳ್ಯದ ಸರ್ವೆ ನಂ.8ರಲ್ಲಿ 6.1 ಎಕರೆ ಜಮೀನು ಒತ್ತುವರಿ ಮಾಡಿರುವುದು ತನಿಖೆಯಿಂದ ಸ್ಪಷ್ಟವಾಗಿದೆ.
ಹೀಗಾಗಿ ಬಿಎಂಟಿಎಫ್ ಅಧಿಕಾರಿಗಳು ಕ್ಲಬ್ ಮಾಲೀಕ ಅರುಣಾಚಲಂ, ಕೆ.ಎಸ್.ಗಿರಿಧರ್, ಬಸವರಾಜ ಮಾಳದೇವರು (ಮೃತಪಟ್ಟಿದ್ದಾರೆ), ಚಿಕ್ಕನಂಜಪ್ಪ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಉತ್ತರ ಹೋಬಳಿಯ ಸರ್ವೆ ನಂಬರ್ 8ರಲ್ಲಿ 31 ಎಕರೆ ಸರ್ಕಾರಿ ಗೋಮಾಳ ಜಮೀನಿತ್ತು. ಅದರಲ್ಲಿ 4 ಎಕರೆ ಜಾಗವನ್ನು ಬೆಸ್ಟ್ ಕ್ಲಬ್ ಶಕ್ತಿ ಹಿಲ್ಸ್ ರೆಸಾರ್ಟ್ 2007ರಲ್ಲೇ ಒತ್ತುವರಿ ಮಾಡಿಕೊಂಡು ತಂತಿ ಬೇಲಿಯನ್ನೂ ಹಾಕಿತ್ತು. ಅದೇ ರೀತಿ ಮತ್ತೆರಡು ಎಕರೆ ಜಮೀನನ್ನೂ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿತ್ತು. ಈ ಬಗ್ಗೆ ಸರ್ವೆ ನಡೆಸಿದಾಗ ಕ್ಲಬ್‍ನ ಮಾಲೀಕ ಅರುಣಾಚಲಂ ಅವರು 6.1ಎಕರೆ ಜಾಗ ಒತ್ತುವರಿ ಮಾಡಿಕೊಂಡಿರುವುದು ಸ್ಪಷ್ಟವಾಗಿತ್ತು. ಈ ಆಧಾರದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.