ಬೆಂಗಳೂರು: ಸಾಲಭಾದೆಗೆ ಗುರುವಾರ ಉತ್ತರ ಕರ್ನಾಟಕದ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬುದ್ದಿನ್ನಿ ಗ್ರಾಮದ ವೆಂಕಟರತ್ನಂ (60) ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾರೆ. ಬ್ಯಾಂಕುಗಳಲ್ಲಿ ಕೃಷಿಗಾಗಿ ಸಾಲ ಪಡೆದಿದ್ದ ಅವರು, ಬೆಳೆ ಕೈಕೊಟ್ಟಿದ್ದರಿಂದ ಆತಂಕಗೊಂಡಿದ್ದರು.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಸಗರ ಗ್ರಾಮದ ಸಿದ್ದಣ್ಣ ಶರಣಪ್ಪ ಪಾಗದ (56) ನೇಣಿಗೆ ಶರಣಾಗಿದ್ದಾರೆ. ಕಳೆದ ವರ್ಷವೂ ಬೆಳೆ ನಷ್ಟ ಅನುಭವಿಸಿದ್ದ ಅವರು ಸುಮಾರು ಏಳು ಲಕ್ಷ ರುಪಾಯಿ ಸಾಲ ಹೊಂದಿದ್ದರು. ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಚಂದ್ರಾಮ ಮಲ್ಲಪ್ಪ ತಳಗೇರಿ (60) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆಯಾಶ್ರಿತ ಒಣ ಬೇಸಾಯದ ಜಮೀನು ಹೊಂದಿದ್ದ ಅವರು, ಸಕಾಲಕ್ಕೆ ಮಳೆಯಾಗದ್ದರಿಂದ ಜಮೀನಿನಲ್ಲಿ ಬಿತ್ತನೆ ಮಾಡಿರಲಿಲ್ಲ. ರೂ. 2 ಲಕ್ಷ ಕೈಗಡ ಸೇರಿ ಸುಮಾರು ರೂ. 3 ಲಕ್ಷ ಸಾಲವಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ.