ಬೆಂಗಳೂರು: ಮಿಸ್ಡ್ ಕಾಲ್ ನೀಡುವ ಮೂಲಕ `ವಾಟ್ಸ್ ಆಪ್ ಗ್ರೂಪ್'ಗೆ ಸೇರಿಕೊಳ್ಳಿ ಹಾಗೂ ನಿಮ್ಮ ಸಮಸ್ಯೆ ಹಂಚಿಕೊಳ್ಳಿ. ಈ ಮೂಲಕ ಮಾದರಿ ವಾರ್ಡ್ ಮಾಡಲು ಕೈಜೋಡಿಸಿ.
ಇದು ಈ ಬಾರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿರುವ ಲೋಕಸತ್ತಾ ಪಕ್ಷದ ಅಭ್ಯರ್ಥಿ ಆರ್. ಪ್ರಕಾಶ್ ಅವರ ವಿನೂತನ ಪ್ರಚಾರ ಕಾರ್ಯಕ್ರಮ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎನ್. ಎಸ್. ಮುಕುಂದ ಈ ವಿಷಯ ತಿಳಿಸಿದರು.
ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಲೋಕಸತ್ತಾ ಪಕ್ಷದ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ಸೋಲು/ಗೆಲವು ಯಾವುದೇ ಆದರೂ ಈ ವಾರ್ಡ್ ಜನರ ಸಮಸ್ಯೆಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಮಿಸ್ಡ್ ಕಾಲ್ ಅಭಿಯಾನದ ಮೂಲಕ ಜನರನ್ನು ಒಂದೇ ವೇದಿಕೆಯಡಿ ಸಂಗ್ರಹಿಸಲಾಗುವುದು. ಎಲ್ಲರನ್ನೂ ಒಟ್ಟಾಗಿ ಸೇರಿಸಿ ಸಮಸ್ಯೆ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶ. ಈ ಮೂಲಕ ವಿನೂತನವಾಗಿ ಜನರ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಅಭ್ಯರ್ಥಿ ಆರ್. ಪ್ರಕಾಶ್, ಲೋಕಸತ್ತಾ ಪಕ್ಷದ ಮುಖಂಡರಾದ ರೋಹಿಣಿ, ದೀಪಕ್ ಇತರರು ಇದ್ದರು.