ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಸಿದವರು ಆ ನಂತರ ಅದನ್ನು ವಾಪಸ್ ತೆಗೆದುಕೊಳ್ಳಲು ಗುರುವಾರ ಕೊನೆ ದಿನವಾಗಿತ್ತು. ಆದರೆ ತಡರಾತ್ರಿಯಾದರೂ ನಾಮಪತ್ರ ವಾಪಸ್ ಪಡೆದವರ ಬಗ್ಗೆ ಆಯೋಗಕ್ಕೇ ಮಾಹಿತಿ ಇಲ್ಲ. ಈ ಮಧ್ಯೆ ನಾಮಪತ್ರಗಳ ಪರಿಶೀಲನೆ ಗೊಂದಲ ಇನ್ನೂ ಬಗೆಹರಿದಿಲ್ಲ.
ವಿವಿಧ ಪಕ್ಷಗಳ ನಾಲ್ವರು ಅಧಿಕೃತ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಹಾಗೆಯೇ ಪಕ್ಷೇತರರಾಗಿ ಅನೇಕ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡರು. ಆದರೆ ಈ ಬಗ್ಗೆ ವಿಧಾನಸಭಾ ಕ್ಷೇತ್ರ ಮಟ್ಟದ ಚುನಾವಣಾಧಿಕಾರಿಗಳು ವಾಪಸ್ ಪಡೆದವರ ಪಟ್ಟಿ ಸಿದ್ಧತೆಗೆ ತಿಣುಕಾಡುತ್ತಿದ್ದರಿಂದ ತಡ ರಾತ್ರಿಯಾದರೂ ಸ್ಪಷ್ಟ ಚಿತ್ರಣ ಹೊರಬೀಳಲಿಲ್ಲ. ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ವಿವರ ಶುಕ್ರವಾರವಷ್ಟೇ ಗೊತ್ತಾಗಲಿದೆ.
ಕೆಲವು ಕ್ಷೇತ್ರಗಳಿಂದ ವಾಪಸ್ ಪಡೆದವರು ಮತ್ತು ಅಂತಿಮವಾಗಿ ಕಣದಲ್ಲಿ ಉಳಿದವರ ಬಗ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಹೆಚ್ಚುವರಿ ಚುನಾವಣಾ ಆಯುಕ್ತರಿಗೆ ಮಾಹಿತಿಬಂದಿತ್ತು. ಆದರೆ ಕೇಂದ್ರ ವಿಭಾಗ ಸೇರಿದಂತೆ ಅನೇಕ ಕ್ಷೇತ್ರಗಳಿಂದ ಮಾಹಿತಿ ಬಂದಿರಲಿಲ್ಲ. ಹೀಗಾಗಿ ನಾಮಪತ್ರ ವಾಪಸ್ ಪಡೆದವರ ಮಾಹಿತಿಯೇ ಇಲ್ಲದೆ ಕಣದಲ್ಲಿ ಉಳಿದವರನ್ನು ಪತ್ತೆ ಮಾಡುವುದು ಇನ್ನೂ ಕಷ್ಟವಾಗಿತ್ತು. ಹೀಗಾಗಿ ತಡರಾತ್ರಿಯಾದರೂ ನಾಮಪತ್ರ ವಾಪಸ್ ಬಗ್ಗೆ ಆಯೋಗಕ್ಕೆ ಮಾಹಿತಿ ಸಿಗಲಿಲ್ಲ. ಈ ಬಗ್ಗೆ ಆಯೋಗದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಶುಕ್ರವಾರ ಮಧ್ಯಾಹ್ನದ ವೇಳೆ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ಹೇಳಿದರು.
ಬಗೆಹರಿಯದ ಗೊಂದಲ
ಸಲ್ಲಿಕೆಯಾಗಿರುವ ನಾಮಪತ್ರಗಳಲ್ಲಿ ಎಷ್ಟು ಕ್ರಬಂಧವಾಗಿವೆ, ಎಷ್ಟು ತಿರಸ್ಕೃತವಾಗಿವೆ ಎನ್ನುವುದೇ ಇನ್ನೂ ಸ್ಪಷ್ಟವಾಗಿಲ್ಲ. ನಾಮಪತ್ರ ಪರಿಶೀಲನೆಗೆ ಮಮಂಗಳವಾರವೇ ಕೊನೆ ದಿನವಾಗಿತ್ತು. ಆದರೆ ಬಹುತೇಕ ಕಡೆ ನಾಮಪತ್ರ ಪರಿಶೀಲನೆ ಸರಿಯಾಗಿ ನಡೆಯಲಿಲ್ಲ. ಆದ್ದರಿಂದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಕೆಲವೆಡೆ ಪರಿಶೀಲನಾ ಕಾರ್ಯವನ್ನು ಬುಧವಾರಕ್ಕೆ ಮುಂದೂಡಲಾಯಿತು. ಗುರುವಾರ ರಾತ್ರಿಯಾದರೂ ಆಯೋಗಕ್ಕೆ ನಾಮಪತ್ರಗಳ ಕ್ರಮಬದ್ಧತೆ ಬಗ್ಗೆ ಸ್ಪಷ್ಟ ವಿವರ ಸಿಗಲಿಲ್ಲ.
ಒಟ್ಟಾರೆ 2037 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅವುಗಳ ಪೈಕಿ 1364 ನಾಮಪತ್ರಗಳು ಕ್ರಮಬದಟಛಿವಾಗಿವೆ. ಆದರೆ ತಿರಸ್ಕೃತವಾಗಿರುವ ಬಗ್ಗೆ ಸ್ಪಷ್ಟ ವಿವರ ಬಂದಿಲ್ಲ. ಮೊದಲಿಗೆ 103 ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಹೇಳಲಾದರೂ ಅವುಗಳು ಯಾವುವು? ಯಾವ ಪಕ್ಷಗಳಿಗೆ ಸೇರಿದವು? ಪಕ್ಷೇತರ ಅಭ್ಯರ್ಥಿ ಗಳ ನಾಮಪತ್ರಗಳು ಎಷ್ಟು ತಿರಸ್ಕೃತವಾಗಿವೆ ಎನ್ನುವ ವಿವರ ಲಭ್ಯವಾಗಲಿಲ್ಲ.