ಬೆಂಗಳೂರು: ರಾಜಧಾನಿ ಬೆಂಗಳೂರಿನ ಜಯದೇವ ಆಸ್ಪತ್ರೆ ಬಳಿಯ ಮೇಲು ಸೇತುವೆ ಮೆಟ್ರೊಗೆ ಬಲಿಯಾಗುವುದು ಬಹುತೇಕ ಖಚಿತ. ಆದರೆ, ಅಲ್ಲಿ ಈಗಿರುವ ಮಾದರಿಯಲ್ಲೇ ಮತ್ತೆ ಮೇಲು ಸೇತುವೆಗಳು ನಿರ್ಮಾಣವಾಗಲಿವೆ. ಅಷ್ಟೇ ಅಲ್ಲ, ರಸ್ತೆ, ಸೇತುವೆ ಮತ್ತು ಮೆಟ್ರೊ ರೈಲು ಮಾರ್ಗಗಳ ಪುಂಜವೇ ಅಲ್ಲಿ ಬರಲಿವೆ!
ಅಂದರೆ, ಜಯದೇವ ಬಳಿ ಸದ್ಯ ಇರುವ ಮೇಲು ಸೇತುವೆ ಹೋಗಿ, ಅದೇ ಮಾದರಿಯಲ್ಲೇ ಬಹಳ ಉದ್ದದ ಮೇಲು ಸೇತುವೆ ಬರಲಿದೆ. ಅದರ ಮೇಲ್ಭಾಗದಲ್ಲಿ ಮೆಟ್ರೊ ರೈಲು ಮಾರ್ಗ ಬರಲಿದ್ದು, ಅಡ್ಡಲಾಗಿ ಮತ್ತೊಂದು ರೈಲು ಮಾರ್ಗ ಬರಲಿದೆ. ಈ ಎಲ್ಲಾ ಮಾರ್ಗಗಳ ಕೆಳಭಾಗದಲ್ಲಿ ಈಗ ಇರುವಂತೆ ಅಂಡರ್‍ಪಾಸ್ ಉಳಿದುಕೊಳ್ಳಲಿದೆ. ಈ ಮೂಲಕ ಜಯದೇವ ಜಂಕ್ಷನ್ ಇನ್ನು ಮುಂದೆ ಅಂಡರ್‍ಪಾಸ್, ರಿಂಗ್ ರಸ್ತೆ, ಮೇಲು ಸೇತುವೆ, ಮೆಟ್ರೊ ರೈಲು ಮಾರ್ಗಗಳನ್ನೂ ಕೇಂದ್ರೀಕರಿಸುವ ದೊಡ್ಡ ಜಂಕ್ಷನ್ ಆಗಲಿದೆ.
ಸದ್ಯಕ್ಕೆ ಈ ಪ್ರಸ್ತಾಪ ಇನ್ನೂ ಸರ್ಕಾರದ ಮಟ್ಟದಲ್ಲೇ ಚರ್ಚೆಯಾಗುತ್ತಿದೆ. ಮೇಲ್ಸೇತುವೆ ವಾದವಿವಾದ: ನಗರದ ಕೇಂದ್ರ ಪ್ರದೇಶ ಮತ್ತು ಐಟಿ ಪಾರ್ಕ್ ನಡುವಿನ ಕೊಂಡಿಯಂತಿರುವ ಜಯದೇವ ಮೇಲ್ಸೇತುವೆಯನ್ನು ಮೆಟ್ರೊ 2ನೇ ಹಂತದ ಯೋಜನೆಗಾಗಿ ನೆಲಸಮಗೊಳಿಸಲಾಗುತ್ತದೆ. ಆದರೆ ಅದರ ಮೇಲೆ ಬಹಳ ಉದ್ದದ ಚತುಷ್ಪಥ ಮೇಲು ರಸ್ತೆ ನಿರ್ಮಾಣವಾಗಲಿದೆ. ಅದರ ಮೇಲ್ಭಾಗದಲ್ಲಿ ಮೆಟ್ರೋ 2ನೇ ಹಂತದ ಮಾರ್ಗ ನಿರ್ಮಾಣವಾಗಲಿದೆ. ಹೀಗೆ ಚತುಷ್ಪಥ ಮೇಲು ರಸ್ತೆ ಮತ್ತು ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಜಯದೇವ ಫ್ಲೈಓವರ್ ನೆಲಸಮಗೊಳಿಸುವುದು ಅನಿವಾರ್ಯ ಎಂದು ಮೆಟ್ರೊ ವಾದಿಸುತ್ತಿದೆ. ಈ ಬೆಳವಣಿಗೆಯಿಂದ ಆತಂಕ್ಕೆ ಒಳಗಾಗಿರುವ ಜಯದೇವ ಮೇಲು ಸೇತುವೆ ಸುತ್ತಮುತ್ತಲ ಕಟ್ಟಡಗಳ ಮಾಲೀಕರು ಸರ್ಕಾರ ಮತ್ತು ಬಿಬಿಎಂಪಿ ವಿರುದಟಛಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಮೇಲು ಸೇತುವೆ ನಿರ್ಮಿಸಿದ್ದೇಕೆ? ಈಗ ಅದನ್ನು ನೆಲಸಮಗೊಳಿಸುವುದೇಕೆ? ಇವರಿಗೆ ದೂರದೃಷ್ಠಿ ಇಲ್ಲವೇ ಎಂದೆಲ್ಲಾ ಕೇಳುತ್ತಿದ್ದಾರೆ. ಆದರೆ, ಮೆಟ್ರೊ ಸಂಸ್ಥೆ ಸಮಜಾಯಿಷಿ ನೀಡಿದೆ. 10 ವರ್ಷಗಳ ಹಿಂದೆ ರು.21 ಕೋಟಿ ವೆಚ್ಚದಲ್ಲಿ ಜಯದೇವ ಮೇಲು ಸೇತುವೆ ನಿರ್ಮಿಸುವಾಗ ನಗರಕ್ಕೆ ಮುಂದೆ ಚತುಷ್ಪಥ ಮೇಲು ರಸ್ತೆ ಬೇಕಾಗಬಹುದು ಎಂಬ ಪರಿಕಲ್ಪನೆ ಇರಲಿಲ್ಲ. ಮೆಟ್ರೊ ರೈಲು ಪರಿಕಲ್ಪನೆಯೂ ಸ್ಪಷ್ಟವಾಗಿರಲಿಲ್ಲ. ಅಂದಿನ ಸಂದರ್ಭಕ್ಕೆ ಪೂರಕವಾಗಿ ಮೇಲು ಸೇತುವೆ ನಿರ್ಮಿಸಲಾಗಿತ್ತು. ಆದರೆ, ಈಗ ಸೇತುವೆ ಅಪ್ರಸ್ತುತ ಮತ್ತು ಅನಗತ್ಯ ಎನ್ನುವಂತಾಗುತ್ತಿದೆ ಎಂಬುದು ಮೆಟ್ರೊ ಅಧಿಕಾರಿಗಳ ವಿವರಣೆ.
ಜಯದೇವ ಬಳಿ ಮಾರ್ಗ ಹೇಗಿರುತ್ತೆ?
ಮೆಟ್ರೋ 2ನೇ ಹಂತದ ಯೋಜನೆ ಪ್ರಕಾರ ರೈಲು ಮಾರ್ಗಗಳು ಪರಸ್ಪರ ಸಂಧಿಸುತ್ತವೆ. ಅಂದರೆ ಪ್ಲಸ್ ಚಿಹ್ನೆ ಮಾದರಿಯಲ್ಲಿ ಸೇತುವೆ ನಿರ್ಮಾಣವಾಗಬೇಕಾಗುತ್ತದೆ. ಮೊದಲು ಬನ್ನೇರುಘಟ್ಟ ರಸ್ತೆಯ ಮಾರ್ಗವಾಗಿ ನಾಗವಾರದವರೆಗೂ ಒಂದು ಮಾರ್ಗ ನಿರ್ಮಾಣವಾಗುತ್ತದೆ. ಈ ಮಾರ್ಗ ಗೊಟ್ಟಿಗೆರೆಯಿಂದ ಆರಂಭವಾಗುತ್ತದೆ. ನಂತರ ಜಯದೇವ ಜಂಕ್ಷನ್, ಡೈರಿ ಸರ್ಕಲ್, ಬಾಷ್ ಸಂಸ್ಥೆ ವೃತ್ತ, ಎಂ.ಜಿ.ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಟ್ಯಾನರಿ ರಸ್ತೆ ಮೂಲಕ ಸಾಗಿ ನಾಗವಾರದಲ್ಲಿ ಅಂತ್ಯವಾಗುತ್ತದೆ.
ಇದಕ್ಕೆ ಅಡ್ಡಲಾಗಿ ನಿರ್ಮಾಣವಾಗುವ ಮತ್ತೊಂದು ಮಾರ್ಗ ಆರ್.ವಿ.ರಸ್ತೆಯಿಂದ ಆರಂಭವಾಗುತ್ತದೆ. ನಂತರ ರಾಗಿಗುಡ್ಡ, ಜಯದೇವ ಜಂಕ್ಷನ್, ಬಿಟಿಎಂ ಬಡವಾಣೆ, ಸಿಲ್ಕ್ ಬೋರ್ಡ್ ಹೊಸೂರು ರಸ್ತೆ ಮೂಲಕ ಬೊಮ್ಮ ಸಂದ್ರದಲ್ಲಿ ಮುಕ್ತಾಯವಾಗುತ್ತದೆ.
ಇದಕ್ಕೂ ಮುನ್ನರಾಗಿ ಗುಡ್ಡ ವೃತ್ತದಿಂದ ಶಿಲ್ಯಬೋರ್ಡ್ ಜಂಕ್ಷನ್ ವರೆಗೂ ಚತುಷ್ಟಥ ಮೇಲು ರಸ್ತೆ ನಿರ್ಮಾಣವಾಗಲಿದೆ. ಐಟಿ ಪಾರ್ಕ್ ಸುತ್ತಮುತ್ತಲ ಪ್ರದೇಶಗಳನ್ನು ಸುಲಭವಾಗಿ ಸಂಪರ್ಕಿಸಲು ಬಿಡಿಎ ಈ ಮಾರ್ಗ ನಿರ್ಮಿಸುತ್ತಿದ್ದು, ಇದಕ್ಕಾಗಿ ರೂಪುರೇಷೆಯನ್ನು ಇನ್ನೂ ಸಿದ್ಧಪಡಿಸಬೇಕಿದೆ. ಒಟ್ಟಾರೆ ಜಯದೇವ ಜಂಕ್ಷನ್ ಪರಸ್ಪರ ಸಂಧಿಸುವ ಎರಡು ರೈಲು ಮಾರ್ಗಗಳಿಗೆ ಕೇಂದ್ರ ಸ್ಥಾನ ಹಾಗೂ ನಿಲ್ದಾಣವೂ ಆಗಲಿದೆ. ಜತೆಗೆ ಚತತುಷ್ಪಥ ರಸ್ತೆ ಹಾದು ಹೋಗುವ ಪ್ರಮುಖ ಸ್ಥಾನವೂ ಆಗುತ್ತದೆ.
ಎಷ್ಟು ಕಟ್ಟಡಗಳಿಗೆ ಕುತ್ತು?
ಮೆಟ್ರೊ ಅಧಿಕಾರಿಗಳ ಪ್ರಕಾರ ಜಯ ದೇವ ಮೇಲು ಸೇತುವೆ ನೆಲಸಮಗೊಳಿಸಿ ಮೆಟ್ರೊ ಮಾರ್ಗ ನಿರ್ಮಿಸಿದರೆ, ಕೇವಲ 19 ಕಟ್ಟಡಗಳು ಮಾತ್ರ ನೆಲಸಮವಾಗುತ್ತ ವೆ. ಒಂದು ವೇಳೆ ಇದಕ್ಕೆ ಪರ್ಯಾಯ ಮಾರ್ಗ ನಿರ್ಮಿಸಲು ಮುಂದಾದರೆ ಸುಮಾರು 94ಕ್ಕೂ ಅಧಿಕ ಕಟ್ಟಡಗಳು ಧ್ವಂಸವಾಗುತ್ತವೆ. ಈ ಪಟ್ಟಿಯಲ್ಲಿ ಇನ್ಫೋಸಿಸ್, ಗೋಪಾಲನ್ ಮಾಲ್, ಮೊಬೈಲ್ ಆಫೀಸ್ ಹಾಗೂ ಅನೇಕ ಬೃಹತ್ ಕಟ್ಟಡಗಳು, ಅಪಾಟ್ರ್ ಮೆಂಟ್‍ಗಳು ಬರುತ್ತವೆ. ಆಗ ಈ ಎಲ್ಲಾ ಕಟ್ಟಡಗಳಿಗೂ ನೀಡಬೇಕಾದ ಪರಿಹಾರ ರು.600 ಕೋಟಿಗಳಿಗೂ ಅಧಿಕವಾಗುತ್ತದೆ. ಆದ್ದರಿಂದ ಹೆಚ್ಚು ಕಟ್ಟಡಗಳೂ ನಾಶವಾಗಬಾರದು. ಮೆಟ್ರೊಗೆ ಹಣವೂ ಉಳಿತಾಯವಾಗಬೇಕು ಎನ್ನುವುದಾದರೆ ಈಗಿರುವ ಮೇಲು ಸೇತುವೆ ಕಿತ್ತುಹಾಕುವುದೇ ಸೂಕ್ತ ಎನ್ನುತ್ತಾರೆ ಮೆಟ್ರೊ ಅಧಿಕಾರಿಗಳು.