ಮಂಡ್ಯ: ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದು ಹಾಗೂ ಬಾಕಿ ಹಣ ಪಾವತಿಗೆ ಒತ್ತಾಯಿಸಿ ರೈತರು ಜಾನುವಾರುಗಳ ಸಮೇತ ರಸ್ತೆಗಿಳಿದಿದ್ದರಿಂದ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಗುರುವಾರ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿತು.
ಮದ್ದೂರಿನ ಶಿವಪುರ, ಶ್ರೀರಂಗಪಟ್ಟಣದ ಕುವೆಂಪು ವೃತ್ತ ಹಾಗೂ ಮಳವಳ್ಳಿ ಪಟ್ಟಣದಲ್ಲಿ ಮಳವಳ್ಳಿ- ಮೈಸೂರು ಹೆದ್ದಾರಿಯಲ್ಲಿ ರೈತರು ಎತ್ತಿನಗಾಡಿ, ದನ ಕರುಗಳ ಸಮೇತ ಬೆಳಗ್ಗೆ 11 ರಿಂದ ಮಧ್ಯಾಹ್ನ 1ಗಂಟೆವರೆಗೆ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಕೆಲವೆಡೆ ಪೊಲೀಸರು ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಪಟ್ಟಣದ ಕುವೆಂಪು ವೃತ್ತದಲ್ಲಿ ಚಳವಳಿ ನಡೆಸುತ್ತಿದ್ದ ರೈತನಾಯಕರಾದ ಶಾಸಕ ಕೆ.ಎಸ್ .ಪುಟ್ಟಣ್ಣಯ್ಯ ಮತ್ತು ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ರೈತರು ಮಧ್ಯಾಹ್ನ 1 ಗಂಟೆ ವೇಳೆಗೆ ಚಳವಳಿ ಹಿಂಪಡೆದರು. ಆನಂತರ ಹೆದ್ದಾರಿ ಸಂಚಾರ ಸುಗಮಗೊಂಡಿತು.