ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಆಮ್ ಆದ್ಮಿ ಪಾರ್ಟಿಯು `ಬೊಂಬಾಟ್ ಬೆಂಗಳೂರು' ಪ್ರಣಾಳಿಕೆ ಬಿಡುಗಡೆಮಾಡಿದೆ.
ಬಿಬಿಎಂಪಿಯನ್ನು ಅನಿವಾರ್ಯವಾಗಿ ಮೂರು ಭಾಗವನ್ನಾಗಿ ಮಾಡುವ ಉದ್ದೇಶವಿದ್ದರೂ ರಾಜ್ಯ ಸರ್ಕಾರ ಅನಿರೀಕ್ಷಿತವಾಗಿ ಬೆಂಗಳೂರು ಜನತೆ ಮೇಲೆ ಚುನಾವಣೆ ಹೇರುವ ಮೂಲಕ ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಲು ಹೊರಟಿದೆ. ಇನ್ನು ಮೂರು ತಿಂಗಳಲ್ಲಿ ಮತ್ತೆ ಬಿಬಿಎಂಪಿ ಚುನಾವಣೆ ಬರುವ ಮುನ್ಸೂಚನೆ ಇರುವುದರಿಂದ ಆಪ್ ಈ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿತ್ತು. ಹೀಗಾಗಿ ಸ್ಪರ್ಧಿಸಿರುವ ನಾನಾ ಪಕ್ಷಗಳು ಹೊರತಂದಿರುವ ಚುನಾವಣಾ ಪ್ರಣಾಳಿಕೆಯು ಅಸಂಬದ್ಧವಾಗಿರುವುದರಿಂದ ಆಪ್ ಎಲ್ಲಾ ವಾರ್ಡ್ ಗಳಲ್ಲಿ ಬೀದಿಸಭೆ ನಡೆಸಿ ಜನರಿಂದ ಸಂಗ್ರಹವಾದ ಒಟ್ಟು ಅಭಿಪ್ರಾಯವನ್ನು ಕ್ರೋಡೀಕರಿಸಿ ಬೊಂಬಾಟ್ ಬೆಂಗಳೂರು ಪ್ರಣಾಳಿಕೆ ಹೊರತರಲಾಗಿದೆ ಎಂದು ಆಪ್ ಮುಖಂಡರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿರೆಡ್ಡಿ, ಬೆಂಗಳೂರಿನ ಜ್ವಲಂತ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ ಈ ಪ್ರಣಾಳಿಕೆ ಜನರ ಧ್ವನಿಯಾಗಿದೆ. ಇದನ್ನು ತಯಾರಿಸಲು ನೂರಾರು ನಿಷ್ಠಾವಂತ ಕಾರ್ಯಕರ್ತರು ಕಳೆದ ಮೂರು-ನಾಲ್ಕು ತಿಂಗಳು ನಡೆಸಿದೆ ಜನಸಭೆ, ಬೀದಿಸಭೆ, ಮನೆ ಮನೆಗೂ ಭೇಟಿ ನೀಡಿ ತಯಾರಿಸಿದ್ದಾರೆ. ಈ ಪ್ರಣಾಳಿಕೆಯಲ್ಲಿರುವ ಎಲ್ಲಾ ಅಂಶಗಳು ಜನರ ಭಾವನೆಯಾಗಿದ್ದು ಎಲ್ಲಾ ಪಕ್ಷಗಳು ನಮ್ಮ ಪ್ರಣಾಳಿಕೆಯನ್ನು ಅಳವಡಿಸಿಕೊಂಡರೆ ಉತ್ತಮ ಬೆಂಗಳೂರಿನ ನಿರ್ಮಾಣ ಸಾಧ್ಯ ಎಂದರು.
ಆಪ್ ಹೆಸರಿನಲ್ಲಿ ಬಿಜೆಪಿ ಪ್ರಚಾರ!
ಆಪ್ ಸಂಚಾಲಕ ಸಿದ್ದಾರ್ಥ್ ಶರ್ಮಾ ಮಾತನಾಡಿ, ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಹಿನ್ನೆಲೆಯಲ್ಲಿ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜಾಜಿನಗರದ 108 ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯೊಬ್ಬರು ತಮಗೆ ಆಪ್ ಬೆಂಬಲ ನೀಡಿದೆ ಎಂದು ಸುಳ್ಳು ಹೇಳಿ ಪ್ರಚಾರ ನಡೆಸುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವ ಬಿಜೆಪಿ
ಇಂತಹ ಕೀಳು ಮಟ್ಟಕ್ಕೆ ಇಳಿಯುತ್ತದೆ ಎಂದುಕೊಂಡಿರಲಿಲ್ಲ. ಬೆಂಗಳೂರಿನ ಜನರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿ ನಿಂತಿರುವ ಅಭ್ಯರ್ಥಿಗಳ ಪೈಕಿ ಪ್ರಾಮಾಣಿಕರನ್ನು ಆರಿಸುವಂತೆ ಕೋರಿದರು.
ಪ್ರಣಾಳಿಕೆಯ ಮುಖ್ಯಾಂಶಗಳು:
*ಜನಪರ ಆಡಳಿತ ನೀಡಿ ಅಧಿಕಾರ ವಿಕೇಂದ್ರೀಕರಣದಿಂದ ಸ್ವರಾಜ್ ಸ್ಥಾಪನೆ.
*2013ರಲ್ಲಿ ರಚಿಸಿರುವ ವಾರ್ಡ್ ಸಮಿತಿಗಳ
ಬಲವರ್ಧನೆ
*ಜನಪರ ಬಜೆಟ್ ತಂದು, ಆದಾಯ ಸೋರಿಕೆ
ತಡೆಗಟ್ಟಬೇಕು
*ನಗರ ನೀರು ನಿರ್ವಹಣಾ ಸಂಸ್ಥೆಯನ್ನು ಬಿಬಿಎಂಪಿ, ಬಿಡಿಎ, ಬೆಂಗಳೂರು ಜಲಮಂಡಳಿ, ಎಲ್‍ಡಿಎಗಳ ನೀರಿನ ಜವಾಬ್ದಾರಿ ಒಗ್ಗೂಡಿಸುವುದು
*ಬೆಂಗಳೂರಿನಲ್ಲಿ ನಾಪತ್ತೆಯಾಗಿರುವ ಕೆರೆಗಳನ್ನು ಪತ್ತೆ ಹಚ್ಚಬೇಕು
*ಸಂಗ್ರಹವಾಗುವ ಕಸದ ವಿಲೇವಾರಿಗೆ ಮಿಶ್ರಗೊಬ್ಬರ, ಬಯೋ ಮೆಥನೇಶನ್ ಕೇಂದ್ರಗಳ ನಿರ್ಮಾಣ