(ಫೋಟೋ ಕೃಪೆ: ಕೆಪಿಎನ್) 
ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ: ಸಂಭ್ರಮ ಸಡಗರವೇ ಇಲ್ಲ ಅವಾಂತರಗಳಿಗಿಲ್ಲ ಕೊರತೆ

ಬಿಬಿಎಂಪಿಯ 197 ವಾರ್ಡ್ ಗಳಿಗೆ ನಡೆದ ಮತದಾನ ವೇಳೆ ಹತ್ತು, ಹಲವು ಸ್ವಾರಸ್ಯಗಳು ಕಂಡು ಬಂದಿತ್ತಾದರೂ ಎಲ್ಲಿಯೂ ಸಂಭ್ರಮ ವಾತಾವರಣ ಇರಲಿಲ್ಲ. ಆದರೆ, ಗೊಂದಲ, ಗಲಾಟೆ, ಅವಾಂತರಗಳಿಗೇನೂ ಕೊರತೆ ಇರಲಿಲ್ಲ. ಇಡೀ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ರಜೆ ವಾತಾವರಣವಿತ್ತು...

ಬೆಂಗಳೂರು: ಬಿಬಿಎಂಪಿಯ 197 ವಾರ್ಡ್ ಗಳಿಗೆ ನಡೆದ ಮತದಾನ ವೇಳೆ ಹತ್ತು, ಹಲವು ಸ್ವಾರಸ್ಯಗಳು ಕಂಡು ಬಂದಿತ್ತಾದರೂ ಎಲ್ಲಿಯೂ ಸಂಭ್ರಮ ವಾತಾವರಣ ಇರಲಿಲ್ಲ. ಆದರೆ, ಗೊಂದಲ, ಗಲಾಟೆ, ಅವಾಂತರಗಳಿಗೇನೂ ಕೊರತೆ ಇರಲಿಲ್ಲ. ಇಡೀ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ರಜೆ ವಾತಾವರಣವಿತ್ತು.

ಮೊದಲನೇ ಬಾರಿ ಮತ ಹಾಕುವವರಿಗೆ ಕಾತರ, ಹಿರಿಯ ಜೀವಿಗಳಿಗೆ ಮತದಾನ ಮಾಡಿ ತೆರಳಿದರೆ ಸಾಕೆನ್ನುವ ಗಡಿಬಿಡಿ, ಮೂಲಸೌಕರ್ಯ ಕೊರತೆಯಾದರೂ ದೂರದೆ ಕೆಲಸ ಮಾಡುವ ಸಿಬ್ಬಂದಿ, ಭದ್ರತೆ ನೀಡುವುದರೊಂದಿಗೆ ಮತಾದಾರರಿಗೆ ಮಾಹಿತಿಯನ್ನೂ ನೀಡುತ್ತಿದ್ದ ಪೊಲೀಸ್ ಸಿಬ್ಬಂದಿ ಇವೆಲ್ಲದರ ನಡುವೆ ಮತದಾನಕ್ಕೆ ನಿರೀಕ್ಷಿಸಿದಷ್ಟು ಮತದಾರರು ಬಂದಿಲ್ಲವಲ್ಲ ಎಂಬ ಚಿಂತೆಯಲ್ಲಿ ಮುಳುಗಿದ ಬಿಬಿಎಂಪಿ.

ಶನಿವಾರ ನಡೆದ ಚುನಾವಣೆಯಲ್ಲಿ ಮತಗಟ್ಟೆಗಳಲ್ಲಿ ವಿಭಿನ್ನ ಭಾವಗಳ ವಾತಾವರಣ ಸೃಷ್ಟಿಯಾಗಿತ್ತು. ಬೆಳಗ್ಗೆ 7 ಗಂಟೆಗೆ 197 ವಾರ್ಡ್‍ಗಳ 6,759 ಮತಗಟ್ಟೆಗಳಲ್ಲಿ ಆರಂಭವಾದ ಮತದಾನಕ್ಕೆ ಬೆ. 9ಗಂಟೆಯ ನಂತರವೂ ಸರಿಯಾದ ಪ್ರತಿಕ್ರಿಯೆ ದೊರೆಯಲಿಲ್ಲ. ಬೆ. 11 ರಿಂದ ಸಂ. 4ರವರೆಗೂ ಹೆಚ್ಚಿನ ವಾರ್ಡ್‍ಗಳ ಮತಗಟ್ಟೆಗಳಲ್ಲಿ ಜನಸಂ ದಣಿ ಕಂಡು ಬಂತು. ವೃದ್ಧರು ತಮ್ಮ ಮಕ್ಕಳ ನೆರವಿನಿಂದ, ವಿಕಲಚೇತನರು ಕುಟುಂಬದವರ ನೆರವಿನಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಅಭ್ಯರ್ಥಿಗಳು, ಶಾಸಕರು, ಸಚಿವರು, ಸಿನಿಮಾ ನಟರು, ಕಲಾವಿದರು ಸೇರಿದಂತೆ ವಿವಿಧ ವರ್ಗದ ಜನರು ಮತದಾನ ಮಾಡಿದರು.

ಮೊದಲನೇ ಬಾರಿಗೆ ಮತದಾನ ಮಾಡಿದ ಯುವಜನರಿಗೆ ಕಾತರ ಹೆಚ್ಚಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಮತಗಟ್ಟೆಯಿಂದ ಬಂದು ಸಂತಸ ಹಂಚಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚುನಾವಣಾ ಆಯೋಗ ಕಾಲೇಜು ವಿದ್ಯಾರ್ಥಿಗಳಿಗೆಂದೇ ಕಾರ್ಯಕ್ರಮ ಆಯೋಜಿಸಿದ್ದು, ಪ್ರತಿ ಕಾಲೇಜು ವಿದ್ಯಾರ್ಥಿಗಳು ಕಡ್ಡಾಯ ಮತದಾನ ಮಾಡಬೇಕು ಎಂದು ಸಂದೇಶ ಕಳುಹಿಸಿತ್ತು.

ಅನಕ್ಷರಸ್ಥರ ಸಾಧನೆ, ಸ್ಮಶಾನ ಬಳಿ ಮತಗಟ್ಟೆ!:
ಬಿಬಿಎಂಪಿ ವ್ಯಾಪ್ತಿಯಲ್ಲಿ ಗೋರಿಪಾಳ್ಯ ಸಾಕ್ಷರತೆಯಲ್ಲಿ ಹಿಂದು ಳಿದ ಪ್ರದೇಶ. ಜೆಜೆ ನಗರ ಹಾಗೂ ಚಾಮರಾಜಪೇಟೆ ವಾರ್ಡ್‍ಗಳ ನಡುವೆ ಹಂಚಿಹೋಗಿರುವ ಗೋರಿಪಾಳ್ಯದಲ್ಲಿ ಮತದಾನದ ಕಾವು ಕಡಿಮೆ ಇರಲಿಲ್ಲ. ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಮತಗಟ್ಟೆ ಸಂ.50 ರಲ್ಲಿ ಶೇ.35ರಷ್ಟು ಮತದಾನವಾಗಿತ್ತು. ಒಟ್ಟು 1,290 ಮತದಾರರಲ್ಲಿ 226 ಮಂದಿ ಮತಚಲಾಯಿಸಿದ್ದರು. ಪಾದರಾಯನ ಪುರದಲ್ಲಿ ಸ್ಮಶಾನದ ಪಕ್ಕವಿರುವ ಅಂಗನವಾಡಿಯಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು.

ಬಿರಿಯಾನಿ ಹಂಚಿಕೆ:
ಹೊಸಹಳ್ಳಿ, ಪೀಣ್ಯ, ವೃಷಭಾವತಿ ನಗರ ವಾರ್ಡ್ ನ ಮತಗಟ್ಟೆಗಳಲ್ಲಿ ಪಕ್ಷಗಳಿಂದ ಮತದಾರರಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತ ನೀಡಿ ಹೊರಬಂದ ಮತದಾರರಿಗೆ ಕಾರ್ಯಕರ್ತರು ಪ್ಯಾಕೆಟ್ ಗಳಳ್ಲಿ ಮಧ್ಯಹ್ನದ ಊಟ ನೀಡುತ್ತಿದ್ದರು. ಇದನ್ನು ಗಮನಿಸುತ್ತಿದ್ದರೂ ಪೊಲೀಸ್ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪಾದರಾಯನಪುರ ವಾರ್ಡ್ ಮತಗಟ್ಟೆ 35ರಲ್ಲೂ ಇದೇ ಸನ್ನಿವೇಶ ಕಂಡುಬಂತು. ಅನೇಕ ಕಡೆ ಬಿರಿಯಾನಿಗಾಗಿ ಕಚ್ಚಾಟವೂ ನಡೆದಿತ್ತು.

ಕಾಂಗ್ರೆಸ್‍ನಿಂದ ಆಟೋ ಸೇವೆ:
ಕೆಂಪಾಪುರದ ಅಗ್ರಹಾರದ ಮತಗಟ್ಟೆಗಳ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮತ ದಾರರಿಗೆ ಆಟೊ ಸೇವೆ ಕಲ್ಪಿಸಿದ್ದರು. ದೂರದ ಪ್ರದೇಶಗಳಲ್ಲಿ ಮನೆಗಳಿಂದ ಬರುವವರಿಗೆ ಹಾಗೂ ಮತದಾನ ಮಾಡಿ ವಾಪಸ್ ತೆರಳುವವರಿಗೆ ಕಾರ್ಯಕರ್ತರು ಆಟೊ ಸೇವೆ ಕಲ್ಪಿಸಿ ಮನೆಯವರೆಗೆ ಕಳಿಸಿಕೊಟ್ಟರು.

ನಿಷೇಧಾಜ್ಞೆ ಲೆಕ್ಕಕ್ಕಿಲ್ಲ:

ಚುನಾವಣಾ ಆಯೋಗದ ನಿಯಮ ಪ್ರಕಾರ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರುತ್ತದೆ. ಆದರೆ, ಲಕ್ಕಸಂದ್ರ ವಾರ್ಡ್‍ನ ಮುನಿಚಿನ್ನಪ್ಪ ಸರ್ಕಾರಿ ಶಾಲೆಯ ಮತಗಟ್ಟೆಯ ಬಳಿಯೇ ಪಕ್ಷಗಳ ಕಾರ್ಯಕರ್ತರು ಟೇಬಲ್ ಹಾಕಿಕೊಂಡು ಕೂತಿದ್ದರು. ಶಾಲೆಯ ಕಾಂಪೌಂಡ್ ಹಿಂಭಾಗವೇ ಕಾರ್ಯ ಕರ್ತರು ಕುಳಿತು ಮತದಾರರನ್ನು ವಿಚಾರಿಸುತ್ತಿದ್ದರು. ಚೌಡೇಶ್ವರಿ ವಾಡ್ರ್ ನಲ್ಲಿ ಮತಗಟ್ಟೆ ಬಳಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಚೀರಾಡುತ್ತ ಪ್ರಚಾರ ಮಾಡುತ್ತಿದ್ದರು.

ಮೂಲಸೌಕರ್ಯ ಕೊರತೆ: ಹೆಚ್ಚಿನ ಮತಗಟ್ಟೆಗಳಲ್ಲಿ ಸಿಬ್ಬಂದಿ ಮೂಲ ಸೌಕರ್ಯದ ಕೊರತೆ ಅನುಭವಿಸಬೇಕಾಯಿತು. ಮಾರುತಿ ಮಂದಿರದ ಫ್ಲೋರೆನ್ಸ್ ಶಾಲೆ ಕೋಣೆಗಳು ಚಿಕ್ಕ ದಾಗಿದ್ದು, ಶೌಚಾಲಯದ ವ್ಯವಸ್ಥೆಯೂ ಇರಲಿಲ್ಲ. ಚುನಾವಣಾ ಆಯೋಗದಿಂದ ಸಿಬ್ಬಂದಿಗೆ ಹಣ ಮಾತ್ರ ನೀಡಿದ್ದರಿಂದ, ಆಹಾರ ತರಿಸಲು ಸಹಾಯಕರನ್ನೇ ಅವಲಂಬಿಸಬೇಕಾದ ಅನಿವಾರ್ಯ ಎದುರಾಗಿತ್ತು.

ಬೇಗೂರಿನಲ್ಲಿ 500 ರೂಪಾಯಿ ಓಡಾಟ!:
ಬೇಗೂರಿನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮತದಾರರಿಗೆ ರು.500 ನೋಟುಗಳನ್ನು ಮತಗಟ್ಟೆ ಬಳಿಯೇ ಹಂಚುತ್ತಿದ್ದು, ಸಿಕ್ಕಿಬಿದ್ದರು. ಸಿಸಿ ಕ್ಯಾಮೆರಾ ನೆರವಿನಂದ ಸಿಕ್ಕಿಬಿದ್ದವ್ಯಕ್ತಿಯನ್ನು ಅಲ್ಲಿನ ಸ್ಥಳೀಯರೇ ಪತ್ತೆ  ಮಾಡಿದರು. ಆದರೆ, ಅಲ್ಲಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಈ ಆರೋಪ ನಿರಾಕರಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಇದೇ ರೀತಿಯ ಆರೋಪ ಯಲಹಂಕದಲ್ಲಿ ಕೇಳಿ ಬಂದಿತ್ತು. ಇಲ್ಲಿ ಕಾಂಗ್ರೆಸ್‍ನ ಕೆಲವರು ದುಡ್ಡು ಹಂಚುತ್ತಿದ್ದರು ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.

ಮನೆಯೊಂದು ವಾರ್ಡ್ ಮೂರು!

ಬಸವನಗುಡಿ, ವಿಜಯನಗರ, ಗೋವಿಂದರಾಜ ನಗರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಂಡುಬಂದ ಸಾಮಾನ್ಯ ಸಮಸ್ಯೆ ಎಂದರೆ ಒಂದೇ ಮನೆಯ ಮತದಾರರನ್ನು ವಿವಿಧ ವಾರ್ಡ್‍ಗಳಲ್ಲಿ ಹಂಚಿರುವುದು. ಇದಕ್ಕೊಂದು ಉದಾಹರಣೆ ಎಂದರೆ ಬಸವನಗುಡಿ ಅಶೋಕನಗರ ನಿವಾಸಿ ಸಾಯಿದತ್ತ ಅವರು ವಿದ್ಯಾಪೀಠದಲ್ಲಿ ಮತದಾನ ಮಾಡುವಂತಾದರೆ, ಅವರ ಮನೆಯ ಐದಾರು ಮತದಾರರನ್ನು ಬಸವನಗುಡಿಗೆ ಹಾಕಲಾಗಿತ್ತು. ಅದೇ ರೀತಿ ಪ್ರಸಾದ್ ಮತ್ತು ನಾಗಲಕ್ಷ್ಮೀ ದಂಪತಿ ವಿದ್ಯಾಪೀಠದಲ್ಲಿ, ಪುತ್ರ ಮದನ್‍ಕುಮಾರ್, ಪುತ್ರಿ ಶ್ರೀದೇವಿ ಬಸವನಗುಡಿಯಲ್ಲಿ ಮತದಾನ ಮಾಡುವಂತಾಗಿತ್ತು. ಇನ್ನು ಗೋವಿಂದರಾಜನಗರದಲ್ಲಿ ಮತದಾರರ ಹೆಸರೇ ಬೇರೆ. ಅವರ ಚಿತ್ರವೇ ಬೇರೆಯಾಗಿತ್ತು. ಬೆಂಗಳೂರು ದಕ್ಷಿಣದಲ್ಲಿ ವಿಳಾಸ ಮತ್ತು ಹೆಸರುಗಳೇ ತಪ್ಪಾಗಿರುವುದು ಅನೇಕ ಮತದಾರರನ್ನು ಗೊಂದಲಕ್ಕೆ ದೂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್