ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ನೀರಸವಾಗಿದ್ದ ಸಂಗತಿಯನ್ನು ಸುದ್ದಿವಾಹಿನಿಗಳು ಪರಿಪರಿಯಾಗಿ ಬಿಂಬಿಸುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಮತದಾನದ ಮಾಡದವರ ವಿರುದ್ಧ ತೀವ್ರ ಟೀಕಾಸ್ತ್ರ ಪ್ರಯೋಗವಾಗಿತ್ತು.
ಅನೇಕರು ತಮ್ಮ ಕ್ರಿಯಾಶೀಲತೆ ತೋರಿಸಿ ಮತದಾನ ಮಾಡದವರನ್ನು ಕೆಣಕುವ ಪ್ರಯತ್ನ ಮಾಡಿದ್ದು ವಿಶೇಷ ಪ್ರಸಾದ್ ಎಂಬ ಫೇಸ್‍ಬುಕ್ ಸದಸ್ಯ,`ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡದವರು ಬದುಕಿದ್ದರೂ ಸತ್ತಂತವರು, ನಿರ್ವೀರ್ಯರು, ಹೇಡಿಗಳು' ಎಂದು ಛೇಡಿಸಿದ್ದರೆ, ದೀಪಾ ಎಂಬುವರು, ತಮ್ಮ ಕೈ ಬರಹದ ಪತ್ರದಲ್ಲಿ `ಮತ ಪೆಟ್ಟಿಗೆಯನ್ನೇ ಸೆಕ್ಯೂರಿಟಿಯೊಂದಿಗೆ ಮನೆ ಮನೆಗೆ ತಗೊಂಡು ಹೋಗಿ, ಮತ ಭಿಕ್ಷೆ ಕೇಳಬೇಕು' ಎಂದು ಪರಿಸ್ಥಿತಿ ಬಿಂಬಿಸಿದ್ದರು.
ಅಶೋಕ್ ಎಂಬುವರು `ಕೆಟ್ಟ ರಾಜಕಾರಣಿ ಹುಟ್ಟುವುದಿಲ್ಲ, ಒಳ್ಳೆಯ ಮನುಷ್ಯರು ಓಟು ಹಾಕದೇ ಇರುವುದರಿಂದ ಸೃಷ್ಟಿಯಾಗುತ್ತಾರೆ' ಎಂದು ತಮ್ಮ ವಾಲ್‍ನಲ್ಲಿ ಹಾಕಿಕೊಂಡಿದ್ದರು. ಈ ರೀತಿಯ ಆಕ್ರೋಶದ ನೂರಾರು ಪೋಸ್ಟುಗಳು ಫೇಸ್ ಬುಕ್ ವಾಲ್ ನಲ್ಲಿ ಕಾಣಿಸಿಕೊಂಡಿದ್ದವು.