ಬಿಬಿಎಂಪಿ ಚುನಾವಣೆ: ಕುಸಿದಿದ್ದ ಮತಪ್ರಮಾಣ ಏರಿದ್ದು ಹೇಗೆ?
ಬಿಬಿಎಂಪಿ ಮತದಾನ ಪ್ರಮಾಣ ಸಂಜೆವರೆಗೂ ಕಡಿಮೆಯಾಗಿದ್ದು, ಮರುದಿನ ದಿಢೀರ್ ಏರಿಕೆಯಾಗಿದ್ದು ಹೇಗೆ? ಈ ಪ್ರಶ್ನೆ ಭಾನುವಾರ ಅಭ್ಯರ್ಥಿಗಳೂ ಸೇರಿದಂತೆ ಬಹುತೇಕ ಜನರನ್ನು ಕಾಡಿದೆ. ಏಕೆಂದರೆ, ಮತದಾನದ...
ಬೆಂಗಳೂರು: ಬಿಬಿಎಂಪಿ ಮತದಾನ ಪ್ರಮಾಣ ಸಂಜೆವರೆಗೂ ಕಡಿಮೆಯಾಗಿದ್ದು, ಮರುದಿನ ದಿಢೀರ್ ಏರಿಕೆಯಾಗಿದ್ದು ಹೇಗೆ? ಈ ಪ್ರಶ್ನೆ ಭಾನುವಾರ ಅಭ್ಯರ್ಥಿಗಳೂ ಸೇರಿದಂತೆ ಬಹುತೇಕ ಜನರನ್ನು ಕಾಡಿದೆ. ಏಕೆಂದರೆ, ಮತದಾನದ ಪ್ರಮಾಣ ಶನಿವಾರ ಮಧ್ಯಾಹ್ನದ ವೇಳೆಗೆ ಶೇ.20 ರಷ್ಟಿತ್ತು. ಸಂಜೆ ಸಮಯಕ್ಕೆ ಅದು ಶೇ.35ಕ್ಕೇರಿತ್ತು.
ಹೀಗಾಗಿ ಎಲ್ಲಾ ಮಾಧ್ಯಮಗಳಲ್ಲೂ ರಾಜಕೀಯ ಮುಖಂಡರು ಮತದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಮರುದಿನ ಮತದಾನ ಪ್ರಮಾಣ ಶೇ.49.31ಕ್ಕೇರಿತು. ಅಂದರೆ ಪ್ರಮಾಣದಲ್ಲಿ ಶೇ.20 ರಷ್ಟು ದಿಢೀರ್ ಏರಿಕೆಯಾಗಿತ್ತು. ಇದಕ್ಕೆ ಕಾರಣವೆಂದರೆ, ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮಾಡಿದ್ದ ಮೊಬೈಲ್ ತಂತ್ರಜ್ಞಾನ ಬಳಕೆ.
ಪ್ರಯೋಗಕ್ಕೆ ಸಿಗದ ಸಹಕಾರ
ಮುಖ್ಯ ಮತಗಟ್ಟೆ ಅಧಿಕಾರಿಗಳಿಗೂ ಸೇರಿದಂತೆ ಎಲ್ಲಾ ಮತಗಟ್ಟೆಗಳಿಗೂ ನಿಯೋಜನೆಯಾಗಿದ್ದ ಸಿಬ್ಬಂದಿಗೆ 7,100 ವಿಶೇಷ ಚಿಪ್ ಗಳನ್ನು ನೀಡಲಾಗಿತ್ತು. ಅದನ್ನು ಅವರು ಮೊಬೈಲ್ ನಲ್ಲಿ ಅಳವಡಿಸಿಕೊಂಡು ಮತದಾನ ಮುಗಿಯುವ ಕೊನೆ ಹಂತದವರೆಗೂ ಆಯೋಗದ ನಿಯಂತ್ರಣಾ ಕೊಠಡಿಗೆ ಸಂದೇಶಗಳನ್ನು ರವಾನಿಸಬೇಕಿತ್ತು.
ಅಂದರೆ ಮತಗಟ್ಟೆಗೆ ತೆರಳುವ ಮುನ್ನ, ಮತಯಂತ್ರ ಹಾಗೂ ಇತರ ಪರಿಕರಗಳನ್ನು ಪಡೆದ ನಂತರ ತಲಾ ಒಂದರಂತೆ ಸಂದೇಶ ರವಾನಿಸಬೇಕಿತ್ತು. ಅದೇ ರೀತಿ ಮತಗಟ್ಟೆಗೆ ತಲುಪಿದ ಕೂಡಲೇ ಒಂದು ಸಂದೇಶ ಹಾಕಬೇಕಿತ್ತು. ಮತದಾನ ಆರಂಭವಾದಾಗ ಮತ್ತು ಆನಂತರ ಪ್ರತಿ 2 ಗಂಟೆಗೆ ಒಂದು ಸಲದಂತೆ ಸಂದೇಶಗಳನ್ನು ಕಳಿಸಬೇಕಿತ್ತು. ಇದರಿಂದ ಮತದಾನದ ಪ್ರಮಾಣ ಅಪ್ ಡೇಟ್ ಆಗುತ್ತದೆಂಬುದು ಚುನಾವಣಾ ಆಯೋಗದ ಲೆಕ್ಕಾಚಾರವಾಗಿತ್ತು.
ಒಂದು ವೇಳೆ ಇದನ್ನು ಎಲ್ಲಾ 7,100 ಮತಗಟ್ಟೆ ಅಧಿಕಾರಿಗಳೂ ಸರಿಯಾಗಿ ಬಳಿಸಿದ್ದರೆ, ಬಹುಶಃ ಸಂಜೆ 6 ಗಂಟೆ ವೇಳೆಗೆ ಎಲ್ಲಾ ಮತಗಟ್ಟೆ ಕೇಂದ್ರಗಳ ಮತದಾನ ಪ್ರಮಾಣ ಕರಾರುವಕ್ಕಾಗಿ ಲಭ್ಯವಾಗುತ್ತಿತ್ತು. ಆದರೆ, ಬಹುತೇಕ ಮತಗಟ್ಟೆ ಅಧಿಕಾರಿಗಳು ಆಯೋಗಕ್ಕೆ ತಮ್ಮ ಮೊಬೈಲ್ ಚಿಪ್ ಗಳಿಂದ ಸಂದೇಶ ಕಳುಹಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಇನ್ನು ಕೆಲವರು ಯಾವಾಗಲೋ ಮನಸ್ಸಿಗೆ ಬಂದಾಗ ಒಮ್ಮೆ ಕಳುಹಿಸಿದ್ದರು. ಇದರಿಂದ ಆಯೋಗದ ಲೆಕ್ಕಾಚಾರವೇ ದಿಕ್ಕು ತಪ್ಪಿತು. ಬಹಳ ನಿರೀಕ್ಷೆ ಇಟ್ಟುಕೊಂಡು ಮಾಡಿದ್ದ ಮೊದಲ ಪ್ರಯೋಗವೂ ಕೈಕೊಟ್ಟು, ರಾತ್ರಿ 12 ಗಂಟೆಯಾದರೂ ಮತದಾನ ಪ್ರಮಾಣ ತಿಳಿಯದಂತಾಗಿತ್ತು.