ಬೆಂಗಳೂರು; ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣ ಕುರಿತು ನಿರ್ದೋಷಿ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ವಾಸ್ತವ ಮುಚ್ಚಿಟ್ಟು ನಿಯಮ ಬಾಹಿರವಾಗಿ ನಾಲ್ಕು ಸರ್ಕಾರಿ ನಿವೇಶನಗಳನ್ನು ಪಡೆದಿದ್ದು, ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ
ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ಎಚ್. ರಾಮಲಿಂಗಾರೆಡ್ಡಿ ಹಾಗೂ ವಕೀಲ ಎ.ಆರ್.ಎಸ್.ಕುಮಾರ್ ಅವರು ಹೈಕೋರ್ಟ್ನ ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು. 1996ರಲ್ಲಿ ಕರ್ನಾಟಕ ಗೃಹ ಮಂಡಳಿಗೆ ಮನೆ ಹಂಚಿಕೆ ಕೋರಿ ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ 1997ರಲ್ಲಿ ಕೆಂಗೇರಿಯ ಮೂರನೇ ಹಂತದಲ್ಲಿ ಫ್ಲಾಟ್ ಮಂಜೂರು ಆಗಿದೆ. 2001ರಲ್ಲಿ ಮತ್ತೊಮ್ಮೆ ಗೃಹಮಂಡಳಿಗೆ ಅರ್ಜಿ ಸಲ್ಲಿಸಿ ಮೈಸೂರಿನ ಹೂಟಗಳ್ಳಿಯ 2ನೇ ಹಂತದಲ್ಲಿ ಮನೆ ಹಂಚಿಕೆ ಪಡೆದಿದ್ದಾರೆ. ಆದರೆ ಈ ಮುನ್ನ ಕೆಂಗೇರಿಯಲ್ಲಿ ಪಡೆದಿದ್ದ ಫ್ಲಾಟ್ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದರು.
2000ರಲ್ಲಿ ಕುಮಾರಸ್ವಾಮಿಯವರ ಪತ್ನಿ ನಾಗರತ್ನ ಬಿಡಿಎಗೆ ಅರ್ಜಿ ಸಲ್ಲಿಸಿ ತಪ್ಪು ಮಾಹಿತಿ ನೀಡಿ ಬೆಂಗಳೂರಿನ ಜ್ಞಾನಭಾರತಿ ಬಡಾವಣೆಯಲ್ಲಿ ಫ್ಲಾಟ್ ಅನ್ನು ಪಡೆದಿದ್ದಾರೆ. ಇಷ್ಟೇ ಅಲ್ಲದೆ ನ್ಯಾಯಾಂಗ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದಲೂ ನಿವೇಶನ ಪಡೆಯಲಾಗಿದೆ. ಈ ನಡುವೆ ಖಾಸಗಿಯಾಗಿಯೂ ನಿವೇಶನ ಖರೀದಿಸಿದ್ದಾರೆ ಎಂದು ಅವರು ಆರೋಪಿಸಿದರು.