ಬೆಂಗಳೂರು: ಹೊಸನಗರದ ರಾಘವೇಶ್ವರ ಸ್ವಾಮಿ ವಿರುದ್ಧ ಗಿರಿನಗರದಲ್ಲಿ ಶನಿವಾರ ದಾಖಲಾಗಿರುವ ಮತ್ತೊಂದು ಪ್ರಕರಣವೂ ಸಿಐಡಿಗೆ ವರ್ಗವಾಗುವ ಸಾಧ್ಯತೆ ಇದೆ.
ಈಗಾಗಲೇ ಮಹಿಳೆಯೊಬ್ಬರು ಕಳೆದ ವರ್ಷ ದಾಖಲಿಸಿದ್ದ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು ಅಂತಿಮ ಹಂತದಲ್ಲಿದೆ. ಹೀಗಾಗಿ 24 ವರ್ಷದ ಮಹಿಳೆ ನೀಡಿರುವ ಪ್ರಕರಣವನ್ನೂ ಸಿಐಡಿಗೆ ವಹಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿದ ನಂತರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ಈಗಾಗಲೇ ಆರಂಭವಾಗಿ ದ್ದು ದೂರುದಾರ ಮಹಿಳೆಯಿಂದ ಪ್ರಾಥಮಿಕ ಹೇಳಿಕೆ ಪಡೆಯಲಾಗಿದೆ. ಅಧಿಕಾರಿಗಳ ಜತೆ ಚರ್ಚಿಸಿದ ನಂತರ ವಿಚಾರಣೆಗೆ ಹಾಜರಾಗುವಂತೆ ರಾಘವೇಶ್ವರ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿ ಆರೋಪ ಕುರಿತಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ ಎಂದು ತನಿಖಾಧಿಕಾರಿಗಳು ಹೇಳಿದರು.
ದೂರು ನೀಡಿರುವ ಮಹಿಳೆಯನ್ನು ಭಾನುವಾರ ಕಿಮ್ಸ್ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಭಾನುವಾರವಾಗಿದ್ದ ಕಾರಣ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳು ಪೂರ್ಣಗೊಂಡಿಲ್ಲ. ಹೀಗಾಗಿ, ಉಳಿದ ಪರೀಕ್ಷೆಗಳು ಸೋಮವಾರ ನಡೆಯಲಿವೆ ಎಂದು ತಿಳಿದು ಬಂದಿದೆ.
ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಯನ್ನು ಕೂಡಲೇ ಬಂಧಿಸಲಾಗಿದೆ. ಅದೇ ರೀತಿ ಈ ಪ್ರಕರಣದಲ್ಲಿ ಕೂಡಲೇ ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ನಾಯಕಿ ವಿಮಲಾ ಹೇಳಿದರು.
ಪೊಲೀಸರ ವರ್ತನೆಯನ್ನು ಗಮನಿಸಿದರೆ ಅವರು ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿಲ್ಲ. ಸ್ವಾಮಿ ವಿರುದ್ಧ ಕ್ರಮಕ್ಕಾಗಿ ಒಂದೆರಡು ದಿನ ಕಾಯುತ್ತೇವೆ. ಬಂಧಿಸದಿದ್ದರೆ ನ್ಯಾಯಕ್ಕಾಗಿ ಗೃಹ ಸಚಿವ. ಕೆ.ಜೆ.ಜಾರ್ಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ವಿಮಲಾ ಹೇಳಿದರು.
ಎಫ್ಐಆರ್ ನಲ್ಲಿ ಏನಿದೆ?
ಶ್ರೀರಾಮಚಂದ್ರಾಪುರ ಮಠದವರು ನಡೆಸುತ್ತಿರುವ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಚದುರವಳ್ಳಿ ಎಂಬಲ್ಲಿನ ಶ್ರೀಭಾರತಿ ವಿದ್ಯಾನಿಕೇತನ ಶಾಲೆಯಲ್ಲಿ ನೊಂದ ಮಹಿಳೆ ತಮ್ಮ ಪ್ರೌಢಶಾಲೆ ವ್ಯಾಸಂಗವನ್ನು ಮಾಡುತ್ತಿದ್ದರು. ಈ ವೇಳೆ ರಾಘವೇಶ್ವರ ಭಾರತಿ ಸ್ವಾಮಿ ದೂರುದಾರರ ಬಗ್ಗೆ ವಿಷೇಷ ಕಾಳಜಿ ತೋರಿಸಿ ಮಾತನಾಡಿಸುತ್ತಿದ್ದರು.
ಹೀಗಿರುವಾಗ 2006ರಲ್ಲಿ ಹೊಸನಗರ ರಾಮಚಂದ್ರಪುರ ಮಠದಲ್ಲಿ ನಡೆದ ಚಾತುರ್ಮಾಸ್ಯ ಕಾರ್ಯಕ್ರಮದ ಸಮಯದಲ್ಲಿ ರಾಘವೇಶ್ವರ ಸ್ವಾಮಿ ತಮ್ಮ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿ 15 ವಯಸ್ಸಿನವರಾಗಿದ್ದ ದೂರುದಾರರಿಗೆ ನಿನ್ನ ಜಾತಕದಲ್ಲಿ ಕೆಲವು ದೋಷಗಳಿವೆ. ಅದನ್ನು ಪರಿಹಾರ ಮಾಡರು ಶ್ರೀರಾಮನ ಪ್ರೇರಣೆಯಾಗಬೇಕು ಎಂದು ಹೇಳಿ ನಂಬಿಸಿ ಬಲವಂತ ಸಂಭೋಗ ಮಾಡಿ ಅತ್ಯಾಚಾರ ಎಸಗಿದ್ದಾರೆ. ಈ ವಿಚಾರವನ್ನು ಯಾರ ಬಳಿಯಾದರೂ ಹೇಳಿದರೆ ಶ್ರೀರಾಮನ ಶಾಪ ತಟ್ಟುತ್ತದೆ ಎಂದು ಬೆದರಿಸಿದ್ದಾರೆ.
ಬಳಿಕ ಮದುವೆ ಮಾಡಿಕೊಂಡು ಗಂಡನೊಂದಿಗೆ ವಾಸವಿದ್ದ ದೂರುದಾರರನ್ನು, 2012ರ ಆಗಸ್ಟ್ ತಿಂಗಳಲ್ಲಿ ಗಿರಿನಗರದ ಶ್ರೀರಾಮಚಂದ್ರಾಪುರ ಮಠಕ್ಕೆ ಕರೆಯಿಸಿಕೊಂಡು ಮತ್ತೆ ಅವರು ತಂಗಿದ್ದ ಕೊಠಡಿಯೊಳಗೆ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾರೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ 2014ರ ಸೆಪ್ಟೆಂಬರ್ 13ರಂದು ತಂದೆಯ ಮನೆಯಲ್ಲಿದ್ದ ದೂರುದಾರರನ್ನು ಅರುಣಶ್ಯಾಮ್, ಅನಂತಣ್ಣ, ರಮೇಶಣ್ಣ, ಸುಧಾಕರ, ಮಧುಕರ ಎಂಬುವರು ಬಲವಂತವಾಗಿ ತಾವು ತಂದಿದ್ದ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಕುಮುಟಾ ಸಮೀಪದ ಕೆಕ್ಕಾರು ಮಠಕ್ಕೆ ಅಪಹರಿಸಿಕೊಂಡು ಹೋಗಿದ್ದರು.
ಅಲ್ಲಿ ಅಕ್ರಮ ಬಂಧನದಲ್ಲಿರಿಸಿಕೊಂಡು `ಮಠದ ಸ್ವಾಮಿ ಪರವಾಗಿ ಸಿಐಡಿ ಪೊಲೀಸರ ಬಳಿ ಸಾಕ್ಷ್ಯ ಹೇಳಬೇಕು' ಎಂದು ತಾಕೀತು ಮಾಡಿ ಬೆದರಿಕೆ ಹಾಕಿದ್ದರು. ಅಲ್ಲದೇ ಜಗದೀಶ ಶರ್ಮಾ ಎಂಬುವರು ದೂರುದಾರ ಮಹಿಳೆಗೆ ಫೋನ್ ಕರೆ ಮಾಡಿ ನಮ್ಮ ವಿರುದ್ಧ ಮಾತನಾಡಿದರೆ ನಿನ್ನ ಬದುಕು ಸರ್ವನಾಶ ಆಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಮಠದ ಸ್ವಾಮಿ ಮತ್ತು ಅವರ ಬೆಂಬಲಿಗರು ದೂರುದಾರರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಕೆಕ್ಕಾರು ಎಂಬಲ್ಲಿ ದಿಗ್ಬಂಧನದಲ್ಲಿರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಸ್ವಾಮಿ ಎರಡು ಬಾರಿ ಅತ್ಯಾಚಾರ ನಡೆಸಿದ್ದಾರೆ. ಹೀಗಾಗಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.