ಬೆಂಗಳೂರು: ಬಿಬಿಎಂಪಿ ಅಧಿಕಾರದ ಚುಕ್ಕಾಣಿಗೆ ಸಂಬಂಧಿಸಿದಂತೆ ನಿಲುವು ಪ್ರಕಟಿಸಲು ಜೆಡಿಎಸ್ ನಿಗದಿ ಮಾಡಿದ್ದ ಸೆ.1ರ ಸಭೆ ಮುಂದಕ್ಕೆ ಹೋಗಿರುವುದರಿಂದ, ಪಕ್ಷದ ಸದಸ್ಯರು
ಕೇರಳದಿಂದ ಸದ್ಯಕ್ಕೆ ಹಿಂದಿರುಗುವ ಸೂಚನೆ ಕಂಡುಬರುತ್ತಿಲ್ಲ.
ಜೆಡಿಎಸ್‍ನ 14 ಕಾರ್ಪೊರೇಟರ್‍ಗಳು ಶಾಸಕರಾದ ಗೋಪಾಲಯ್ಯ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ ಕೇರಳಕ್ಕೆ ತೆರಳಿದ್ದಾರೆ. ಸೆ.1ರ ಸಭೆಗೆ ಎಲ್ಲರೂ ಕೇರಳದಿಂದ ಬರಬೇಕು ಎಂದು ಸೂಚಿಸಲಾಗಿತ್ತು. ಆದರೆ ಈಗ ಸಭೆಯ ದಿನಾಂಕ ಮುಂದಕ್ಕೆ ಹೋಗಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮಾಜಿ ಪ್ರಧಾನಿ ದೇವೇಗೌಡರ ಜೊತೆ ಚರ್ಚಿಸಿದ ವೇಳೆ ಸೆ.1ರಂದು ಸಭೆ ನಡೆದ ಬಳಿಕ ಪಕ್ಷದ ನಿಲುವು ಹೇಳುತ್ತೇವೆ ಎಂದು ತಿಳಿಸಿದ್ದರು.
ಸಭೆ ಮುಂದೆ ಹೋಗಿರುವುದರಿಂದ ನಿಲುವು ಪ್ರಕಟಿಸುವ ಹಾಗೂ ಸದಸ್ಯರು ಬೆಂಗಳೂರಿಗೆ ಹಿಂದಿರುಗುವ ದಿನವೂ ಮುಂದಕ್ಕೆ ಹೋಗಿದೆ. ಇವೆಲ್ಲ ಗೊಂದಲಗಳ ನಡುವೆ ಭಾನುವಾರವೇ
ಬೆಂಗಳೂರಿಗೆ ಹಿಂದಿರುಗಬೇಕು ಎಂದು ಪಕ್ಷದ ಮುಖ್ಯಸ್ಥರಿಂದ ಸೂಚನೆ ಹೋಗಿದೆ ಎಂದು ಹೇಳಲಾಗಿತ್ತು. ಆದರೆ ಕೇರಳದಲ್ಲಿರುವ ಸದಸ್ಯರು ಹಿಂದಿರುಗುವ ಕುರಿತು ಯಾವುದೇ ಸಂದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
`ಸೆ.1ಕ್ಕೆ ನಿಗದಿಯಾಗಿದ್ದ ಸಭೆ ಮುಂದಕ್ಕೆ ಹೋಗಿದೆ. ಆದರೆ ಕೇರಳದಿಂದ ವಾಪಸ್ ರಾಜ್ಯಕ್ಕೆ ಬರಬೇಕು ಎಂಬ ಸೂಚನೆ ಬಂದಿಲ್ಲ. ಪಕ್ಷೇತರ ಕಾರ್ಪೊರೇಟರ್‍ಗಳನ್ನು ಭೇಟಿ ಮಾಡುವ ಉದ್ದೇಶದಿಂದ ಕೇರಳಕ್ಕೆ ಬಂದಿಲ್ಲ. ಕುಟುಂಬ ಸಮೇತರಾಗಿ ಪ್ರವಾಸದ ಉದ್ದೇಶದಿಂದ ಬಂದಿದ್ದೇವೆ. ಪಕ್ಷೇತರ ಕಾರ್ಪೊರೇಟರ್‍ಗಳು ಬೇರೆ ಕಡೆ ಇದ್ದಾರೆ. ನಾವು ಬೇರೆ ಕಡೆ ಇದ್ದೇವೆ' ಎಂದು ಶಾಸಕ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.
ಪಕ್ಷೇತರರ ಜೊತೆ ಇಲ್ಲ!
ಜೆಡಿಎಸ್ ಸದಸ್ಯರು ಕೇರಳದ ಕೊಚ್ಚಿಗೆ ತೆರಳಿದ್ದು, ಪಕ್ಷೇತರ ಸದಸ್ಯರನ್ನು ಇದುವರೆಗೂ ಭೇಟಿ ಮಾಡಿಲ್ಲ ಎಂದು ಜೆಡಿಎಸ್ ಶಾಸಕರು ಸ್ಪಷ್ಟಪಡಿಸಿದ್ದಾರೆ. ಹಿಂದಿನ ದಿನ ಜೆಡಿಎಸ್ ಸದಸ್ಯರು ಕೇರಳಕ್ಕೆ ತೆರಳಿದಾಗ 6 ಮಂದಿ ಪಕ್ಷೇತರರನ್ನು ಭೇಟಿ ಮಾಡಿ ಮಾತುಕತೆ ನಡೆಸಲೆಂದೇ ಹೋಗುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಎರಡು ದಿನಗಳು ಕಳೆಯುತ್ತಾ ಬಂದರೂ ಜೆಡಿಎಸ್ ಸದಸ್ಯರು ಪಕ್ಷೇತರರು ಇರುವ ಅಲೆಪ್ಪಿಗೆ ಹೋಗಿಲ್ಲ. ಕೆಲವು ಜೆಡಿಎಸ್ ಸದಸ್ಯರು ಹಾಗೂ ಶಾಸಕರು ಕುಟುಂಬ ಸದಸ್ಯರ ಸಮೇತರಾಗಿಯೂ ಬಂದಿದ್ದು, ಪ್ರವಾಸದ ಮೋಜಿನಲ್ಲಿದ್ದಾರೆ.