ಬೆಂಗಳೂರು: ನಗರ ಹೊರವಲಯದ ಕನಕಪುರ ರಸ್ತೆಯ ಸೋಮನಹಳ್ಳಿ ಬಳಿಯ ಹೈವೇ ವಾಟರ್‍ಪೈಪ್ ಹೆಸರಿನ ರೆಸ್ಟೋರೆಂಟ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಕಗ್ಗಲಿಪುರ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ನಿಷೇಧಿತ ಹುಕ್ಕಾ ಸಾಧನಗಳು ಹಾಗೂ ಇನ್ನಿತರ ವಸ್ತುಗಳು ದೊರಕಿವೆ. ಈ ಸಂಬಂಧ ರೆಸ್ಟೋರೆಂಟ್ ಮಾಲೀಕರು ಹಾಗೂ ಅಕ್ರಮ ದಂಧೆಗೆ ಅವಕಾಶ ಮಾಡಿಕೊಟ್ಟ ಭೂಮಾಲೀಕ ರಾಮಣ್ಣ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೈವೇ ವಾಟರ್‍ಪೈರ್ ರೆಸ್ಟೋರೆಂಟ್ ನಲ್ಲಿ ಯುವಕರು ಮಾದಕವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಮೊದಲು ನಮ್ಮ ಸಂಘಟನೆಯ ಕೆಲ ಯುವಕರು ಗ್ರಾಹಕರಂತೆ ಸ್ಥಳಕ್ಕೆ ತೆರಳಿ ವಿಡಿಂಯೋ ಮಾಡಿಕೊಂಡಿದ್ದರು. ಈ ವೇಳೆ ಒಳಗಿದ್ದ ಯುವಕರು ಹಲ್ಲೆ ಮಾಡಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಅವರೊಂದಿಗೆ ದಾಳಿ ನಡೆಸಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹರೀಶ್ ಹೇಳಿದರು. ಸೋಮನಹಳ್ಳಿ ಬಳಿ ಗೋ ಕಾರ್ಟಿಂಗ್‍ಗಾಗಿ ಟ್ರ್ಯಾಕ್ ಇದೆ. ಅದಕ್ಕೆ ಹೊಂದಿಕೊಂಡಂತೆ. ಗುಹೆ ಮಾದರಿಯಲ್ಲಿ ರೆಸ್ಟೋರೆಂಟ್ ಮಾಡಿಕೊಂಡಿದ್ದು ಒಳಗೆ ಅಕ್ರಮ ಚಟುವಟಿಕೆ ನಡೆಸಲಾಗುತ್ತದೆ. ನೂರಾರು ಯುವಕರು ಹುಕ್ಕಾ ಸೇವಿಸುತ್ತಾ ಮಾದಕ ವಸ್ತುಗಳನ್ನು ಬಳಸಿಕೊಂಡು ಜೋರಾಗಿ ಸಂಗೀತ ಹಾಕಿಕೊಂಡು ಕುಣಿದಾಡುತ್ತಿದ್ದರು. ದಾಳಿ ವೇಳೆ ಕಾಂಡೋಮ್, ಬಂಗಿ ಸೊಪ್ಪು ಹಾಗೂ ಹುಕ್ಕಾ ಸಾಧನಗಳು ದೊರಕಿವೆ ಎಂದು ಹರೀಶ್ ತಿಳಿಸಿದರು. ಯುವಕರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಿ ದ್ದಾಗಿ ಹೇಳುತ್ತಿದ್ದಾರೆ. ಆದರೆ, ನಿಷೇಧಿತ ಹುಕ್ಕಾವನ್ನು ಬಳಸಲಾಗುತ್ತಿತ್ತು. ಹೀಗಾಗಿ, ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಲಾಗುತ್ತಿದೆ. ದಾಳಿ ವೇಳೆ ಹಲವು ಯುವಕರು ಸ್ಥಳ ದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಇನ್ನು ನಾಪತ್ತೆಯಾಗಿರುವ ರೆಸ್ಟೋರೆಂಟ್ ಮಾಲೀಕ ಹಾಗೂ ಅಕ್ರಮಕ್ಕೆ ಅವಕಾಶ ನೀಡಿದ ಭೂಮಾಲೀಕರನ್ನು ಬಂಧಿಸಲಾಗುತ್ತದೆ ಎಂದು ಕಗ್ಗಲಿಪುರ ಪೊಲೀಸರು ಹೇಳಿದ್ದಾರೆ.