ಬೆಂಗಳೂರು: ಕಾಲೇಜಿನಲ್ಲಿ ಡ್ರೆಸ್ ಕೋಡ್ ನಿರ್ಬಂಧ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕುಮಾರ-ಸ್ವಾಮಿ ಲೇಔಟ್‍ನಲ್ಲಿರುವ ದಯಾ-ನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸೋಮವಾರ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಡ್ರೆಸ್ ಕೋಡ್ ಸರಿಯಲ್ಲ. ಅದನ್ನು ಹಿಂಪಡೆಯಬೇಕು. ವಾಹನ ನಿಲುಗಡೆಗೆ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು. ಆಂತರಿಕ ಅಂಕಗಳನ್ನು 8 ಯುನಿಟ್ ಮಾಡಲಾಗುತ್ತದೆ. ಇದರಿಂದ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ಸಮಯ ಸಿಗುವುದಿಲ್ಲ.
ಹಾಗಾಗಿ ಅದನ್ನು 2 ಕ್ಕೆ ಇಳಿಸಬೇಕು. ವ್ಯಾಸಂಗ ಮುಗಿದ ನಂತರ ವರ್ಗಾವಣೆ ಪತ್ರದ ಜತೆ ತಮಗೆ ಸೇರಿದೆ ಅಗತ್ಯ ದಾಖಲೆಗಳನ್ನು ನೀಡಬೇಕು. ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಓಡಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಸಂಸ್ಥೆ ನಿರ್ದೇಶಕ ಶರ್ಮಾ, ಆಡಳಿತ ಮಂಡಳಿ ಜತೆ ಚರ್ಚಿಸಿ ಕ್ರಮಕೈಗೊಳ್ಳವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.