ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಕ್ಕೆ ಒಳಪಡುತ್ತಿರುವ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ, ಉಪನ್ಯಾಸಕ ಹಾಗೂ ನೌಕರರ ಒಕ್ಕೂಟದ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ 1987ರಿಂದ 1994-95ನೇ ಸಾಲಿನಲ್ಲಿ ಪ್ರಾರಂಭವಾಗಿರುವ 123 ಶಾಲಾ, ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಸಂಬಂಧ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಆದರೆ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಮಾತ್ರ ವೇತನ ಅನುದಾನಕ್ಕೆ ಒಳಪಡಿಸಿ ಉಳಿದ 21 ಪದವಿ ಪೂರ್ವ ಕಾಲೇಜುಗಳನ್ನು ಕಾರ್ಯಭಾರದ ಕೊರತೆಯ ಕಾರಣ ನೀಡಿ ಆರ್ಥಿಕ ಇಲಾಖೆ ಕಡತವನ್ನು ಶಿಕ್ಷಣ ಇಲಾಖೆಗೆ ಹಿಂದಿರುಗಿಸಿ ನೂರಾರು ಸಿಬ್ಬಂದಿಗೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಈ ಹಿಂದೆ 2012ರಲ್ಲಿ 38 ಕಾಲೇಜುಗಳಲ್ಲಿ ಕಾರ್ಯಭಾರದ ಕೊರತೆಯಿದೆ ಎನ್ನಲಾಗಿತ್ತಾದರೂ ಕೊನೆಗೆ ಆ ಎಲ್ಲ ಕಾಲೇಜುಗಳನ್ನು ವೇತನಾದಾನಕ್ಕೆ ಒಳಪಡಿಸಲಾಗಿದೆ. ಆ ಆದೇಶ ನಮ್ಮ ಕಾಲೇಜುಗಳಿಗೆ ಏಕಿಲ್ಲ. ಕಳೆದ 2 ವರ್ಷಗಳಿಂದ ಕಡತ ಶಿಕ್ಷಣ ಇಲಾಖೆಯಲ್ಲೇ ಬಿದ್ದಿದೆ. ಶಿಕ್ಷಣ ಇಲಾಖೆಯ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. 24 ವರ್ಷಗಳಿಂದ ನಾವೆಲ್ಲ ಸಂಬಳವಿಲ್ಲದೇ ಕೆಲಸ ಮಾಡುತ್ತಿದ್ದೇವೆ. ಇನ್ನೂ 4-5 ವರ್ಷಗಳಲ್ಲಿ ಬಹಳಷ್ಟು ಜನ ನಿವೃತ್ತಿ ಹೊಂದುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಿಕ್ಷಣ ಇಲಾಖೆ ಹಾಗೂ ಆರ್ಥಿಕ ಇಲಾಖೆ ಸುಮ್ಮನಿರುವುದು ಸರಿಯಲ್ಲ ಎಂದರು.
ಸುಮಾರು 150ಕ್ಕೂ ಹೆಚ್ಚು ಉಪನ್ಯಾಸಕರು ಹಾಗೂ ನೌಕರರು 12 ದಿನಗಳಿಂದ ಮನೆ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ. ದೂರದ ಊರುಗಳಿಂದ ಬಂದಿದ್ದೇವೆ. ನಮಗೆ ನ್ಯಾಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ. ಅಹೋರಾತ್ರಿ ಧರಣಿ ನಡೆಸುತ್ತೇವೆ. ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಸರ್ಕಾರಕ್ಕೆ ನೌಕರರು ಎಚ್ಚರಿಕೆ ನೀಡಿದ್ದಾರೆ.