ಹಾವೇರಿ: ಕೇಂದ್ರ ಸರ್ಕಾರ ಬರ ನಿರ್ವಹಣೆಗಾಗಿ ರಾಜ್ಯಕ್ಕೆ ರು.1540 ಕೋಟಿ ಅನುದಾನ ನೀಡಿದರೂ ಅದನ್ನು ಬಳಕೆ ಮಾಡಿಲ್ಲ. ಇನ್ನುಳಿದ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಳೇ ಬಿಲ್ಲಿಗೆ ಹೊಸ ಬಿಲ್ಲು ಹಾಕಿ ಅನುದಾನ ಖರ್ಚು ಮಾಡುತ್ತದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಟೀಕಿಸಿದರು.
ರಾಜ್ಯದೆಲ್ಲೆಡೆ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ. ಇದುವರೆಗೆ ಬರ ನಿರ್ವಹಣೆ ಕಾಮಗಾರಿ, ಬೆಳ ನಷ್ಟ ಪರಿಹಾರ ನೀಡಿಲ್ಲ. ರೈತರು ಹತಾಶರಾಗಿದ್ದಾರೆ. ಕೇಂದ್ರ ಸರ್ಕಾರ ಮೊದಲ ಕಂತಾಗಿ ರು. 512 ಕೋಟಿ ನೀಡಿದ್ದು, ಕೇವಲ ರು.39 ಕೋಟಿ ಖರ್ಚು ಮಾಡಲಾಗಿದೆ. ಎರಡನೇ ಕಂತಿನಲ್ಲಿ ಮತ್ತೆ ರು.1540 ಕೋಟಿ ಅನುದಾನ ಕೊಟ್ಟಿದೆ. ಆರ್ಥಿಕ ವರ್ಷ ಮುಗಿಯಲು ಕೇವಲ ಮೂರು ತಿಂಗಳು ಬಾಕಿಯಿದೆ. ಕೇಂದ್ರ ಕೊಟ್ಟ ಅನುದಾನವನ್ನು ಸಿದ್ದರಾಮಯ್ಯ ಸರ್ಕಾರ ಹಳೆ ಕಲ್ಲು, ಹೊಸ ಬಿಲ್ಲು ಎಂಬಂತೆ ಖರ್ಚು ಹಾಕಲಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಜನರು ಹತಾಶರಾಗಿದ್ದಾರೆ.ಸರ್ಕಾರದ ವಿರುದ್ಧ ಜನ ಹೋರಾಟ ಮಾಡುವಂತಾಗಿದೆ. ಸಿದ್ದರಾಮಯ್ಯನವರ ವಿರೋಧಿ ಅಲೆ ಎದ್ದಿದೆ. ಕಾಂಗ್ರೆಸ್ ನವರಿಗೆ ಸಂಸತ್ ಅಧಿವೇಶನ ನಡೆಯುವುದೂ ಬೇಕಿಲ್ಲ. ಬಡವರ ಪರ ನಿರ್ಣಯ ಕೈಗೊಳ್ಳಲು ಬಿಡುತ್ತಿಲ್ಲ. ನ್ಯಾಶನಲ್ ಹೆರಾಲ್ಡ್ ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಹೈಕೋರ್ಟ್ ಸೋನಿಯಾ ಗಾಂಧಿ ಹಾಗೂ ರಾಹುಲ್ ವಿರುದ್ಧ ಕ್ರಮಕ್ಕೆ ಆದೇಶ ಮಾಡಿದ್ದರೆ, ಕಾಂಗ್ರೆಸ್‍ನವರು ಮೋದಿ ಸರ್ಕಾರದ ವಿರುದ್ಧ ಮಾತನಾಡುತ್ತಾರೆ. ಅವರಿಗೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಟೀಕಿಸಿದರು.