ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಆರೋಪ ಸಂಬಂಧ ಶಾಸಕ ಅನಿಲ್ ಲಾಡ್, ಆರತಿ ಲಾಡ್ ಮತ್ತು ಲಾಡ್ ನಿರ್ದೇಶಕರಾಗಿರುವ ವಿಎಸ್‍ಎಲ್ ಮೈನಿಂಗ್ ಕಂಪನಿಗೆ ಹೈಕೋರ್ಟ್ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬಂಧನ ಭೀತಿಯಲ್ಲಿದ್ದ ಅನಿಲ್ ಲಾಡ್ ಮತ್ತವರ ಪತ್ನಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ಅನಿಲ್ ಲಾಡ್, ಅವರ ಪತ್ನಿ ಆರತಿ ಲಾಡ್ ಮತ್ತು ವಿಎಸ್‍ಎಲ್ ಮೈನಿಂಗ್ ಕಂಪನಿ ತಲಾ 2 ಲಕ್ಷ ರೂ. ವೈಯಕ್ತಿಕ ಬಾಂಡ್,ಒಬ್ಬ ವ್ಯಕ್ತಿಯ ಭದ್ರತಾ ಖಾತ್ರಿ ಒದಗಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ವಿಚಾರಣೆಗೆ ಹಾಜರಾಗಬೇಕು: ಭದ್ರತಾ ಖಾತ್ರಿಯನ್ನು ಡಿ.30ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಾಕ್ಷಿ ನಾಶಕ್ಕೆ ಯತ್ನಿಸಬಾರದು ಎಂದು ನ್ಯಾಯಪೀಠ ಷರತ್ತುಗಳನ್ನು ವಿಧಿಸಿದೆ. ಅನಿಲ್‍ಲಾಡ್ ಕುಟುಂಬದ ಸದಸ್ಯರು ನಿರ್ದೇಶಕರಾಗಿರುವ ವಿಎಸ್‍ಎಲ್ ಮೈನಿಂಗ್ ಕಂಪೆನಿ ಕಾರವಾರದ ಬೇಲೆಕೇರಿ ಬಂದರಿನಿಂದ 2012ರಿಂದ 2013ರ ನಡುವೆ 50 ಸಾವಿರ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದೆ ಎಂದು ಆರೋಪಿಸಿ ಸಿಬಿಐ 2013ರ ಸೆ.29ರಂದು ದೂರು ದಾಖಲಿಸಿತ್ತು. ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಪ್ರಕರಣ ಸಂಬಂಧ ಅನಿಲ್ ಲಾಡ್ ಹಾಗೂ ಅವರ ಪತ್ನಿಗೆ ಸಿಬಿಐ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.