ಬೆಂಗಳೂರು: ಕೈಗಾರಿಕಾ ವಸಾಹತು ಪ್ರದೇಶಗಳ ಸುತ್ತಮುತ್ತ ಇರುವ ಕಿರಿದಾದ ಸರ್ಕಾರಿ ಭೂಮಿಗಳು, ಕೆರೆಗಳು ಹಾಗೂ ಗೋಮಾಳ ಸ್ವರೂಪದ ಭೂಮಿಗಳನ್ನು ಕೆಐಎಡಿಬಿಗೆ ಒಪ್ಪಿಸುವ ಮಹತ್ವದ ನಿರ್ಧಾರವನ್ನು ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದ್ದು, ಪೊ್ರ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ್ದ ಸಾಂಸ್ಕೃತಿಕ ನೀತಿಯ ವರದಿಗೆ ಸಭೆಯಲ್ಲಿ ಅಂಗೀಕಾರ ನೀಡಿಲ್ಲ. ಈ ವರದಿ ಬಗ್ಗೆ ಸಂಪುಟದ ಸದಸ್ಯರಿಗೆ ಸೂಕ್ತ ಮಾಹಿತಿ ಇರಲಿಲ್ಲ.
ಎಲ್ಲರಿಗೂ ವರದಿ ಲಭ್ಯವಾಗದೇ ಇದ್ದರಿಂದ ಈ ನೀತಿಯನ್ನು ಒಪ್ಪಿಕೊಳ್ಳುವುದಕ್ಕೆ ನಿರಾಕರಿಸಲಾಗಿದೆ. ಹೀಗಾಗಿ ಎಲ್ಲ ಸಚಿವರು ಈ ವರದಿ ಬಗ್ಗೆ ಅಧ್ಯಯನ ನಡೆಸಿದ ಬಳಿಕವೇ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಜತಗೆ ಕೆಲ ಸಚಿವರು ಸಾಂಸ್ಕೃತಿಕ ನೀತಿ ರೂಪಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದ್ದೇ ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಐಎಡಿಬಿಗೆ ಭೂಮಿ : ರಾಜ್ಯದ 15 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಐಎಡಿಬಿ ನಿರ್ಮಿಸಿರುವ ಕೈಗಾರಿಕಾ ಪ್ರದೇಶಗಳ ಸುತ್ತಮುತ್ತ ಇರುವ ಚಿಕ್ಕಪುಟ್ಟ ಸರ್ಕಾರಿ ಭೂಮಿಗಳು, ಕೆರೆಗಳು, ಗೋಮಾಳ ಸ್ವರೂಪದ ಜಾಗಗಳ ನಿರ್ವಹಣೆ ವಿಚಾರದಲ್ಲಿ ಹಲವು ವರ್ಷಗಳಿಂದ ಗೊಂದಲ ಇದೆ.
ಸೂರಿನಲ್ಲಿ 582 ಎಕರೆ, ಬೆಳಗಾವಿ 3580 ಎಕರೆ, ತುಮಕೂರಿನಲ್ಲಿ 3032 ಎಕರೆ, ಮಂಡ್ಯ 160 ಎಕರೆ, ಶಿವಮೊಗ್ಗ 598 ಎಕರೆ ಸೇರಿದಂತೆ 15 ಜಿಲ್ಲೆಗಳಲ್ಲಿ ಇರುವ ಕೈಗಾರಿಕಾ ಪ್ರದೇಶಗಳ ಸುತ್ತಮುತ್ತ 10814 ಎಕರೆಯಷ್ಟು ಇಂಥಭೂಮಿಗಳಿವೆ. ಇವುಗಳನ್ನು ಕೆಐಎಡಿಬಿಗೆ ಹಸ್ತಾಂತರಿಸುವುದರ ಜತೆಗೆ ನಿರ್ವಹಣೆ ಮತ್ತು ರಕ್ಷಣೆಯ ಹೊಣೆಯನ್ನೂ ನೀಡಲಾಗುತ್ತದೆ.
ವೈದ್ಯರ ನೇಮಕ: ರಾಜ್ಯದ ಇಎಸ್ಐ ಆಸ್ಪತ್ರೆಗಳಲ್ಲಿ ಖಾಲಿ ಇರುವ 10 ವೈದ್ಯರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವುದಕ್ಕೆ ಒಪ್ಪಿಗೆ.
ಭೂ ಹಂಚಿಕೆ : ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿರುವ 25 ಎಕರೆ ಸರ್ಕಾರಿ ಭೂಮಿಯನ್ನು ಎಲ್ಲ ಜಾತಿಯ ಶಿಕ್ಷಣ ಸಂಸ್ಥೆಗಳು ಹಾಗೂ ಹಾಸ್ಟೇಲ್ ನಿರ್ಮಾಣಕ್ಕೆ ಹಂಚಿಕೆ ಮಾಡಲು ಒಪ್ಪಿಗೆ. ಈ ಪೈಕಿ 4.7 ಎಕರೆ ಜಾಗವನ್ನು ರಾಮಕೃಷ್ಣಾಶ್ರಮಕ್ಕೆ ನೀಡಲಾಗುತ್ತದೆ. ಉಳಿದ ಜಾಗವನ್ನು ತಲಾ ಅರ್ಧ ಎಕರೆಯಂತೆ 15 ಸಮುದಾಯಗಳಿಗೆ ಹಂಚಿಕೆ ಮಾಡಲಾಗುತ್ತದೆ.
ಮಾರ್ಗಸೂಚಿಗೆ ಒಪ್ಪಿಗೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೌಸಿಂಗ್ ಫಾರ್ ಆಲ್ ಯೋಜನೆಗೆ ಮಾರ್ಗಸೂಚಿ ರಚಿಸಲು ಒಪ್ಪಿಗೆ. ಇದರಿಂದ ರಾಜ್ಯಕ್ಕೆ ರು.200 ಕೋಟಿ ಲಭ್ಯವಾಗುವ ಸಾಧ್ಯತೆ.
ಕಾವೇರಿ 4ನೇ ಹಂತ ಎರಡನೇ ಘಟ್ಟಕ್ಕೆ ಹೆಚ್ಚುವರಿ ಅನುದಾನ: ಕಾವೇರಿ 4ನೇ ಹಂತ ಎರಡನೇ ಘಟ್ಟ ಯೋಜನೆಗೆ ಹೆಚ್ಚುವರಿ ಅನುದಾನ ನೀಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಕಾವೇರಿ ನೀರು ಸರಬರಾಜು ಯೋಜನೆಗಾಗಿ ಈ ಹಿಂದೆ ನೀಡಿದ್ದ ರು.3380 ಕೋಟಿ ಅನುದಾನವನ್ನು ರು.5780 ಕೋಟಿ ಗೆ ಹೆಚ್ಚಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಬಾಲ್ಯ ವಿವಾಹ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ
ಬಾಲ್ಯ ವಿವಾಹ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ನ್ಯಾ.ಶಿವರಾಜ್ ಪಾಟೀಲ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿ ಆಧಾರದ ಮೇಲೆ ಕಾಯ್ದೆ ತಿದ್ದುಪಡಿಗೆ ನಿರ್ಧರಿಸಲಾಗಿದ್ದು, ದಂಡ ಪ್ರಮಾಣ ಹೆಚ್ಚಳದ ಜತೆಗೆ ಸ್ಥಳೀಯ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics