ಬೆಂಗಳೂರು: ಕಂಡಕ್ಟರ್ ಗಳು ಪ್ರಯಾಣಿಕರನ್ನು ಕೆಲವೊಮ್ಮೆ ವಿನಾಕಾರಣ ನಿಂದಿಸುವುದುಂಟು, ತಮ್ಮ ಒರಟು ಭಾಷೆಯಿಂದಸೌಜನ್ಯ ಮರೆತು ವರ್ತಿಸುವುದುಂಟು. ಅಂಥದೊಂದು ಘಟನೆ ಇಲ್ಲಿದೆ.
ಆ ಪ್ರಯಾಣಿಕನ ಹೆಸರು ವೆಂಕಟೇಶ್. ಜಿ-9 ಬಸ್ ನಂಬರ್ (ಕೆಎ -01, ಎಫ್ಎ 1433) ಬಸ್ಸಿನಲ್ಲಿ ಬೆಳಿಗ್ಗೆ 11.30ಕ್ಕೆ ಮೇಕ್ರಿ ಸರ್ಕಲ್ ನಲ್ಲಿ ಏರಿದ್ದು. ಕಂಡಕ್ಟರ್ ಡ್ರೈವರ್ ಬಳಿಯೇ ಇದ್ದುದರಿಂದ, ಈ ಪ್ರಯಾಣಿಕ ಮೂರ್ನಾಲ್ಕು ಬಾರಿ ಕರೆದರೂ ಕಂಡಕ್ಟರ್ ಈತನ ಕರೆಗೆ ಓಗೊಡಲಿಲ್ಲ. ಕೊನೆಯ ಬಾರಿ ಎಂಬಂತೆ ಕಂಡಕ್ಟರ್ ಅನ್ನು ಕರೆದಾಗ ದೂರದರ್ಶನ ಕೇಂದ್ರದ ಸ್ಟಾಪ್ ಹತ್ತಿರ ಬರುತ್ತಿತ್ತು. ಆಗ ಬಂದ ಕಂಡಕ್ಟರ್ ಮೇಕ್ರಿ ಸರ್ಕಲ್ ನಲ್ಲೇ ಹತ್ತಿ ಏಕೆ ಟಿಕೆಟ್ ತೆಗೆದುಕೊಳ್ಳಲಿಲ್ಲ ಎಂದು ದಬಾಯಿಸಿದ. ಪ್ರಯಾಣಿಕ ತಾನು ಮೂರ್ನಾಲ್ಕು ಬಾರಿ ಕರೆದಿದ್ದನ್ನು, ಸಹಪ್ರಯಾಣಿಕರೂ ಅನುಮೋದಿಸಿದರು. ಆದರೆ ಇದ್ದಕ್ಕಿದ್ದಂತೆ ಏಕವಚನದಲ್ಲಿ ಮಾತಾಡುವುದನ್ನು ಶುರುವಿಟ್ಟುಕೊಂಡ ಕಂಡಕ್ಟರ್. ಕಂಡಕ್ಟರ್ನ ಅನುಚಿತ ಭಾಷೆಯಿಂದ ಬೇಸರಗೊಂಡ ಪ್ರಯಾಣಿಕ, ನಿಮ್ಮ ಹೆಸರು ಹೇಳಿ ಕಂಡಕ್ಟರ್ ಅಂದರೂ, ನಿನಗ್ಯಾಕೆ ಹೇಳಬೇಕು ಎಂದ ಕಂಡಕ್ಟರ್ ತನ್ನ ಏಕವಚನದ ಭಾಷೆಯಿಂದ ಎರಗಿದ. ಈತ ಕರ್ತವ್ಯದಲ್ಲಿದ್ದರೂ ನೇಮ್ ಬ್ಯಾಡ್ಜ್ ಧರಿಸಿರಲಿಲ್ಲ. ನಂತರ ಡ್ರೈವರ್ ಬಳಿ ಹೋಗಿ ಪ್ರಯಾಣಿಕನ ಕುರಿತು ಅವಾಚ್ಯವಾಗಿ ನಿಂದಿಸುತ್ತ ಕೂತ ಕಂಡಕ್ಟರ್. ಪ್ರಯಾಣಿಕ ಆತನ ಫೋಟೋ ತೆಗೆದುಕೊಂಡರೂ, ಅದರಲ್ಲಿ ಕಂಡಕ್ಟರ್ನ ಮುಖ ಸ್ಪಷ್ಟವಾಗಿ ಕಾಣದಂತಾಗಿದೆ.
ಪ್ರಯಾಣಿಕನ ಏಕೈಕ ದೂರೆಂದರೆ, ಸೌಜನ್ಯವನ್ನೇ ಕಲಿಯದ, ಗೂಂಡಾಗಳಂತೆ ವರ್ತಿಸುವ ಇಂಥ ಕೆಲವು ಕಂಡಕ್ಟರ್ ಗಳಿಂದ ಬಿಎಂಟಿಸಿ ಇಲಾಖೆಗೆ ಕೆಟ್ಟ ಹೆಸರು ಬರುವುದು. ಇವರಿಗೆ ಪ್ರಯಾಣಿಕರ ಜೊತೆ ಕನಿಷ್ಠ ಸೌಜನ್ಯವನ್ನು ಇಲಾಖೆ ಹೇಳಿಕೊಡುವುದೇ?
ನಿಮ್ಮ ಪ್ರಯಾಣದ ಕಷ್ಟಗಳನ್ನು ನಮಗೆ ತಿಳಿಸುವಿರಲ್ಲವೇ?