ಕೊಪ್ಪಳ: ತಮ್ಮ ಮಗಳ ಮೇಲಿನ ಅತ್ಯಾಚಾರ ವಿರುದ್ಧ ಧ್ವನಿ ಎತ್ತಿದ ಸಂಗನಾಳ ಗ್ರಾಮದ ಸಂತ್ರಸ್ತ ಕುಟುಂಬದ ಮುಖ್ಯಸ್ಥ ಬಹಿಷ್ಕಾರದ ಯಾತನೆಯಿಂದ ಬಳಲಿ ಈಗ ಊರು ತೊರೆಯಲು ನಿರ್ಧರಿಸಿದ್ದಾರೆ. ಈ ಊರಲ್ಲಿ ನಾವಿನ್ನು ನೆಮ್ಮದಿಯಾಗಿ ಇರಲು ಸಾಧ್ಯವೇ ಇಲ್ಲ. ಬೇರೆಡೆ ವಾಸಿಸಲು ಅನುಕೂಲ ಮಾಡಿಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದು ಬೇಡಿಕೊಂಡಿದ್ದಾರೆ.
ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸಂಗನಾಳ ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬದ ಸಮಸ್ಯೆ ಆಲಿಸಿದರು. ಬಹಿಷ್ಕಾರಕ್ಕೊಳಗಾಗಿರುವ ಕಾರಣ ಇಲ್ಲಿ ನಮಗೆ ಬದುಕುವುದು ಅಸಾಧ್ಯ. ಬೇರೆ ಕಡೆಗೆ ಸ್ಥಳಾಂತರ ಮಾಡಿಕೊಡಿ ಎಂದು ಅರಿಕೆ ಮಾಡಿಕೊಂಡಿದ್ದಾರೆ. ನಲ್ಲಿ ನೀರು ತರಲು ಬಿಡುತ್ತಿಲ್ಲ, ಬೋರ್‍ವೆಲ್‍ಗೆ ಹೋಗಲು ಅವಕಾಶ ನೀಡುತ್ತಿಲ್ಲ. ಯಾರೂ ನಮ್ಮನ್ನು ಮಾನಾಡಿಸದಿದ್ದರೆ ಕುಟುಂಬದ ಜತೆ ಇಲ್ಲಿ ಜೀವನ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪಿಡಿಒ ರಾಮಪ್ಪ ಹರಿಜನ, ಗ್ರಾಪಂನಿಂದ ನಿ ವೇಶನ, ಆಶ್ರಯ ಮನೆ ನೀಡುವುದಾಗಿ ಹೇಳಿದರೂ ಒಪ್ಪದೆ ಕಣ್ಣೀರಿಟ್ಟರು.
ಸಮಾಜ ಕಲ್ಯಾಣ ಇಲಾಖೆಯ ಯಲಬುರ್ಗಾ ತಾಲೂಕು ಅಧಿಕಾರಿ ಜಯಪ್ರಕಾಶ ಕುಟುಂಬಕ್ಕೆ ಸಾಂತ್ವನ ಹೇಳಿ, ತಮಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಎಂದರೂ ಕುಟುಂಬ ಒಪ್ಪದಿದ್ದಾಗ, ಯಲಬುರ್ಗಾದಲ್ಲಿ ಆಶ್ರಯ ಮನೆ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳಕ್ಕೆ ತಹಸೀಲ್ದಾರ್ ಶಿವಲಿಂಗಪ್ಪ ಪಟ್ಟದಕಲ್ ಆಗಮಿಸಿದ್ದರು. ಘಟನೆ ಕುರಿತು ಸ್ಥಳೀಯರ ಹೇಳಿಕೆ ಪಡೆದಿದ್ದಾರೆ.
ಕ್ರಮಕ್ಕೆ ಸಿಎಂ ಸೂಚನೆ
ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಅತ್ಯಾಚಾರಕ್ಕೆ ಒಳಗಾಗಿರುವ ಕುಟುಂಬವೇ ಬಹಿಷ್ಕಾರಕ್ಕೆ ಒಳಗಾಗಿದ್ದರೆ ಅಮಾನವೀಯ. ಇದನ್ನು ಪರಿಶೀಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ಸೂಚನೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ದ್ದಾರೆ. ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಮಾಹಿತಿ ತರಿಸಿಕೊಂಡು ಕುಟುಂಬಕ್ಕೆ ರಕ್ಷಣೆ ನೀಡಲಾಗುವುದು. ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಸೂಚಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಕಾರ ಹಾಗೇನೂ ಆಗಿಲ್ಲವಂತೆ, ಆದರೂ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದರು.