ಚಿಕ್ಕಬಳ್ಳಾಪುರ/ಕೋಲಾರ: ಅಲ್ಲಲ್ಲಿ ಪ್ರತಿಭಟನೆ, ಬಿಕೋ ಎಂದ ರಸ್ತೆಗಳು, ಪರದಾಡಿದ ಪ್ರಯಾಣಿಕರು, ತಿರುಪತಿಯ ವೈಕುಂಟ ದರ್ಶನ ತಪ್ಪಿಸಿಕೊಂಡ ಭಕ್ತರು, ಅಡುಗೆ ಮನೆಯಾಟದ ಹೆದ್ದಾರಿಗಳು, ಆಟೋವೊಂದಕ್ಕೆ ಕಲ್ಲು-ಮಾತಿನ ಚಕಮಕಿ.
ಇವು ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ರೈತಪರ ಸಂಘಟನೆಗಳು ಮತ್ತು ನೀರಾವರಿ ಹೋರಾಟ ಸಮಿತಿ ಸೋಮವಾರ ಕರೆ ನೀಡಿದ್ದ ಅವಿಭಜಿತ ಜಿಲ್ಲೆಯ ಬಂದ್ ಎಫೆಕ್ಟ್.
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಎರಡೂ ಜಿಲ್ಲೆಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟ 90 ದಿನ ದಾಟಿದರೂ ಕ್ಯಾರೆ ಎನ್ನದ ಸರ್ಕಾರದ ವಿರುದ್ಧ ಸೋಮವಾರ ಇಡೀ ಜಿಲ್ಲೆಯ ಜನತೆ ತಿರುಗಿಬಿದ್ದಿದ್ದರು. ಹೋರಾಟ ವೇಳೆ ಭರವಸೆ ನೀಡಿ ಹೋಗಿದ್ದ ನಾಯಕರೂ ಮಾತು ತಪ್ಪಿದ್ದು ಇನ್ನಷ್ಟು ಕೋಪಕ್ಕೆ ಕಾರಣವಾಗಿತ್ತು.
ಕೋಲಾರ ನಗರ ಸಂಪೂರ್ಣ ಬಂದ್ ಆಗಿದ್ದರೆ, 5 ನಿಮಿಷ ರೈಲು ತಡೆದು ಪ್ರತಿಭಟನೆ ಮುಕ್ತಪಡಿಸಲಾಯಿತು. ಜಿಲ್ಲೆಯ ಮುಳುಬಾಗಿಲು, ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಕೆಜಿಎಫ್ ತಟಸ್ಥವಾಗಿತ್ತು. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ,ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟದಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಜನಜೀವನ ಅಸ್ತವ್ಯಸ್ತ: ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿದೆ. ಈ ಎರಡೂ ಹೆದ್ದಾರಿಗಳು ಬಂದ್ ಆಗಿದ್ದರಿಂದ ಹೊರ ರಾಜ್ಯಕ್ಕೆ ಹೋಗಬೇಕಿದ್ದ ಪ್ರಯಾಣಿಕರು ತೀವ್ರ ಪರದಾಡಿದರು. ಅಲ್ಲದೆ ಹೋಟೆಲ್ ಸೇರಿದಂತೆ ಯಾವುದೇ ಅಂಗಡಿಗಳು ತೆರೆಯದ ಕಾರಣ ಊಟ ತಿಂಡಿಗೂ ಪರದಾಡುವಂತಾಯಿತು. ಹೀಗಾಗಿ ಹೋರಾಟಗಾರರು ರಸ್ತೆಯಲ್ಲೇ ಅಡುಗೆ ಮಾಡಿ ಪ್ರಯಾಣಿಕರಿಗೂ ಆಹಾರದ ವ್ಯವಸ್ಥೆ ಮಾಡಿದರು. ಸೋಮವಾರದ ಬಂದ್ ವೇಳೆಯೂ ಮಹಿಳಾ ಹೋರಾಟಗಾರರ ಶ್ರಮ ಬಹಳಷ್ಟಿತ್ತು.
ಬಂದ್ ವೇಳೆ ಆಸ್ಪತ್ರೆ ಸೇರಿದಂತೆ ತುರ್ತು ಕಾರ್ಯಗಳ ನಿಮಿತ್ತ ಸಾಗಬೇಕಿದ್ದ ಪ್ರಯಾಣಿಕರಿಗೆ ಅನುವು ಮಾಡಿಕೊಡಲಾಯಿತು. ಬಂದ್ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬ್ಯಾಂಕುಗಳು, ಹೋಟೆಲ್, ಸಿನಿಮಾ, ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ನ್ಯಾಯಾಲಯ ಎಂದಿನಂತೆ ಕಾರ್ಯನಿರ್ವಹಿಸಿತು.