ಕೊಳ್ಳೇಗಾಲ: ಪದೇ ಪದೆ ಬೆಳೆ ನಾಶ ಮಾಡುವ ಕಾಡಾನೆಗೆ ಬುದ್ಧಿ ಕಲಿಸಲೆಂದು ರೈತನೊಬ್ಬ ಅಕ್ರಮವಾಗಿ ತನ್ನ ಜಮೀನಿಗೆ ವಿದ್ಯುತ್ ಬೇಲಿ ಹಾಕುತ್ತಾನೆ. ಆ ವಿದ್ಯುತ್ ಬೇಲಿ ತಗುಲಿ ಕಾಡಾನೆ ಸಾವಿಗೀಡಾಗುತ್ತದೆ. ತನ್ನ ಮೇಲೆ ಎಲ್ಲಿ ಹತ್ಯೆ ಆರೋಪ ಬರುತ್ತದೋ ಎಂದು ಹೆದರಿ ರೈತ ಸತ್ತ ಆನೆಯನ್ನು ಎಂಟು ತುಂಡುಗಳನ್ನಾಗಿ ಕತ್ತರಿಸಿ ಜಮೀನಿನಲ್ಲಿ ಹೂತು ಹಾಕುತ್ತಾನೆ.ಹತ್ತು ದಿನಗಳ ಹಿಂದೆಯೇ ಮಣ್ಣಾಗಿದ್ದ ಈ ಪ್ರಕರಣ ವಿಶೇಷ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ.
ಘಟನೆ ವಿವರ: ಕೊಳ್ಳೇಗಾಲ ತಾಲೂಕಿನ ಜಾಗೇರಿ ಸಮೀಪದ ಸಿಲುವೈಪುರದಲ್ಲಿ ಚಿನ್ನಪ್ಪಯ್ಯ ಅಲಿಯಾಸ್ ಜಪಮಲೈ ಜಮೀನಿನಲ್ಲಿ ಕಡ್ಲೆಕಾಯಿ, ಕಲ್ಲಂಗಡಿ ಹಾಗೂ ಜೋಳದ ಬೆಳೆ ಬೆಳೆದಿದ್ದರು. ಜಮೀನು ಕಾಡಂಚಿನಲ್ಲಿದ್ದ ಕಾರಣ ಕಾಡು ಪ್ರಾಣಿಗಳ ಅದರಲ್ಲೂ ಮುಖ್ಯವಾಗಿ ಆನೆ ಹಾವಳಿಗೆ ಬೇಸತ್ತಿದ್ದ ಚಿನ್ನಪ್ಪಯ್ಯ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಹಾಕಿದ್ದರು.
ಡಿ.12ರ ರಾತ್ರಿ ಹೆಣ್ಣಾನೆಯೊಂದು ಬೆಳೆ ತಿನ್ನಲು ಜಮೀನಿಗೆ ನುಗ್ಗಿದೆ. ಈ ವೇಳೆ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ. ಆನೆ ಸಾವಿಗೀಡಾದ ವಿಚಾರ ತಿಳಿಯುತ್ತಿದ್ದಂತೆ ಗಾಬರಿಗೊಂಡ ಚಿನ್ನಪ್ಪಯ್ಯ ಜಮೀನಿಗೆ ಧಾವಿಸಿ ಮಹದೇವ ಎಂಬಾತನ ನೆರವು ಪಡೆದು ಅದನ್ನು ಜಮೀನಿನಲ್ಲೇ ಹೂತು ಹಾಕಲು ನಿರ್ಧರಿಸುತ್ತಾನೆ. ಇದಕ್ಕಾಗಿ ಸತ್ತ ಆನೆಯನ್ನು 8 ತುಂಡುಗಳಾಗಿ ಕತ್ತರಿಸಿ ಜಮೀನಿನಲ್ಲೇ ಇದ್ದ ಬಾವಿಗೆ ಹಾಕಿ ಅದರ ಮೇಲೆ ಒಂದು ಅಡಿಯಷ್ಟು ಮಣ್ಣು ಸುರಿದಿದ್ದಾನೆ. ಆದರೆ, ಎರಡು ದಿನಗಳಲ್ಲಿ ಈ ವಾಸನೆ ಬರುತ್ತಿದ್ದಂತೆ ಡಿ.13ರಂದು ಜೆಸಿಬಿಯೊಂದನ್ನು ಕರೆಸಿ ಸಂಪೂರ್ಣ ಮಣ್ಣು ಹಾಕಲು ನಿರ್ಧರಿಸುತ್ತಾನೆ.
ಜೆಸಿಬಿ ಚಾಲಕನಿಂದ ಹೊರಬಂತು ಸತ್ಯ!: ಜೆಸಿಬಿಯಿಂದ ಮಣ್ಣು ಸುರಿದ ಬಳಿಕ ಇಡೀ ಪ್ರಕರಣ ಮುಚ್ಚೇ ಹೋಯ್ತು ಎಂದು ಚಿನ್ನಪ್ಪಯ್ಯ ಭಾವಿಸಿದ್ದ. ಆದರೆ, ಅದೇ ಜೆಸಿಬಿ ಚಾಲಕ ಅಲೆಗ್ಸಾಂಡರ್‍ನಿಂದ ಪ್ರಕರಣ ಈಗ ಬಯಲಾಗಿದೆ. ಮಣ್ಣು ಹಾಕುತ್ತಿದ್ದಾಗ ಏನೋ ಸತ್ತ ಪ್ರಾಣಿಯ ವಾಸನೆ ಬರುತ್ತಿದೆ ಎಂದು ಅಲೆಗ್ಸಾಂಡರ್ ಪ್ರಶ್ನಿಸಿದ್ದಕ್ಕೆ ಹಂದಿ ಸತ್ತಿದೆ, ಬೇಗ ಮಣ್ಣು ಹಾಕು ಎಂದು ರೈತ ಗದರಿಸಿದ್ದ. ಆದರೆ ಹಂದಿ ಸತ್ತರೆ ಇಷ್ಟೊಂದು ವಾಸನೆ ಬರುವುದಿಲ್ಲವಲ್ಲಾ ಎನ್ನುವ ಅನುಮಾನದಿಂದ ಅಲೆಗ್ಸಾಂಡರ್ ಸಿಐಡಿ ವಿಶೇಷ ಅರಣ್ಯ ಸಂಚಾರಿದಳದ ಪಿಎಸೈ ಶಿವಕುಮಾರ್ ಮತ್ತು ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದಾನೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಪರಿಶೀಲಿಸಿದಾಗ ಆನೆ ಸತ್ತಿರುವುದು ಖಚಿತವಾಗಿದೆ. ನಂತರ ಅವರು ಅರಣ್ಯಾಧಿ ಕಾರಿಗಳಿಗೆ ವಿಚಾರ ಮುಟ್ಟಿಸಿದ್ದಾರೆ.
ಅಧಿಕಾರಿಗಳ ದೌಡು: ಮಧ್ಯಾಹ್ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ, ಎಸಿಎಫ್ ನಿರುಪಮಾ, ಶಿವರಾಮಯ್ಯ, ಆರ್‍ಎಫ್ ಒ ಅಂಕರಾಜು, ಪಿಎಸೈ ಶಿವಕುಮಾರ್ ಮತ್ತಿತರರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆನೆ ಹೂತಿದ್ದ ಸ್ಥಳ ಮಹಜರು ಮಾಡಿದ್ದಾರೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ.