ಚಾಲಕನ ಬರ್ಬರ ಕೊಲೆ
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಟೋ ಚಾಲಕನೊಬ್ಬನನ್ನು ಮತ್ತೊಬ್ಬ ಆಟೋ ಚಾಲಕ ದಾರುಣವಾಗಿ ಹತ್ಯೆ ಮಾಡಿರುವ...
ಬೆಂಗಳೂರು: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಟೋ ಚಾಲಕನೊಬ್ಬನನ್ನು ಮತ್ತೊಬ್ಬ ಆಟೋ ಚಾಲಕ ದಾರುಣವಾಗಿ ಹತ್ಯೆ ಮಾಡಿರುವ ಘಟನೆ ದಯಾನಂದ ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ದಯಾನಂದ ನಗರದ ಕೊಳೆಗೇರಿ ನಿವಾಸಿ ಜಾಫರ್ ಸಾದಿಕ್ (36) ಹತ್ಯೆಗೀಡಾದ ಆಟೋ ಚಾಲಕ. ಹತ್ಯೆಗೈದ ಆರೋಪಿ ತಬ್ರೇಜ್ ಪರಾರಿಯಾಗಿದ್ದಾನೆ. ಜಾಫರ್ ಸಾಧಿಕ್ ಹಾಗೂ ಬ್ರೇಜ್ ಇಬ್ಬರು ಸ್ನೇಹಿತರು. ತಬ್ರೇಜ್ ಸಾದಿಕ್ ಹೆಂಡತಿ ಸಂಬಂಧಿ ಮಹಿಳೆಯೊಂದಿಗೆ ನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಇಬ್ಬರು ಹಲವು ಬಾರಿ ಗಲಾಟೆ ಕೂಡ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಬ್ರೇಜ್ ಸಾದಿಕ್ ಹತ್ಯೆ ಮಾಡಲು ಹೊಂಚು ಹಾಕುತ್ತಿದ್ದ.
ಗುರುವಾರ ಮಧ್ಯಾಹ್ನ 1.40ರ ಸುಮಾರಿಗೆ ಮನೆ ಬರುವಾಗ ಕೊಳಗೇರಿ ಯಲ್ಲಿರುವ ಯಲ್ಲಮ್ಮ ದೇವಾಲಯದ ಬಳಿ ಆಟೋ ನಿಲ್ಲಿಸಿ ಮನೆಗೆ ಹೊರಟಿದ್ದ. ಈ ಸಂದರ್ಭದಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಾಧಿಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಸಾಧಿಕ್ ತಲೆಗೆ ಹಾಗೂ ಎದೆಗೆ ಬಲವಾಗಿ ಪೆಟ್ಟುಬಿದಿದೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸಾಧಿಕ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪೊಲೀಸರು ನಿಮ್ಹಾನ್ಸ್ ಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಸಾದಿಕ್ ಮೃತಪಟ್ಟಿದ್ದಾನೆ. ಆರೋಪಿ ತಬ್ರೇಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೊಲೆಗಾರರ ಶೋಧಕಾರ್ಯ ಆರಂಭವಾಗಿದೆ.
ಮನೆ ಬಾಗಿಲು ಮುರಿದು ಕಳವು
ಐಐಎಂನ ನಿವೃತ್ತ ಅಧಿಕಾರಿಯ ಮನೆ ಬಾಗಿಲು ಮುರಿದು ಕಳವು ಮಾಡಿರುವ ಘಟನೆ ಸದಾಶಿವನಗರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಡಾಲರ್ಸ್ ಕಾಲೊನಿಯ 1ನೇ ಕ್ರಾಸ್ನಲ್ಲಿರುವ ದಿಲೀಪ್ ಆರ್. ಮೆಹ್ತಾ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮೆಹ್ತಾ ಅವರು ಮನೆಗೆ ಬೀಗ ಹಾಕಿಕೊಂಡು ಮುಂಬೈಗೆ ಹೋಗಿದ್ದರು.ಪ್ರತಿ ನಿತ್ಯ ಮನೆ ಕೆಲಸಕ್ಕೆ ಬರುವ ಕೆಲಸದಾಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಗೆಲಸದಾಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಸ್ಥಳ ಪರಿಶೀಲನೆ ನಡೆಸಿರುವ ಸದಾಶಿವನಗರ ಪೊಲೀಸರು, ಮುಂಬೈನಲ್ಲಿರುವ ಮೆಹ್ತಾ ಅವರು ವಾಪಸ್ ಬಂದು ಮನೆಯಲ್ಲಿ ಕಳುವಾಗಿರುವ ವಸ್ತುಗಳ ಬಗ್ಗೆ ಮಾಹಿತಿ ನೀಡಬೇಕು. ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.