ಬೆಂಗಳೂರು: ಏಕಮುಖ ಸಂಚಾರ ರಸ್ತೆಯಲ್ಲಿ ಬೈಕ್ ಹಾಗೂ ಜೆಸಿಬಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಆಡುಗೋಡಿ ಬಾಳಪ್ಪಲೇಔಟ್ ನಿವಾಸಿಯಾಗಿರುವ ಗುತ್ತಿಗೆದಾರ ಎಂ.ಅನಿತ್ (25) ಮೃತಪಟ್ಟವರು. ಕೋರಮಂಗಲದ ಸಂಬಂಧಿಕರ ಮನೆಗೆ ಹೋಗಿದ್ದ ಅನಿತ್ ಶುಕ್ರವಾರ ಬೆಳಗ್ಗೆ 12.30ರ ಸುಮಾರಿನಲ್ಲಿ ಸ್ನೇಹಿತ ನೂತನ್ (24) ಜತೆಗೆ ತಮ್ಮ ಬೈಕ್‍ನಲ್ಲಿ ಮನೆಗೆ ವಾಪಸಾಗುತ್ತಿದ್ದರು.
ಈ ವೇಳೆ ಕೋರಮಂಗಲ ಯಡನೀರು ಮಠ ರಸ್ತೆಯ ಶ್ರೀಕೃಷ್ಣ ದೇವಸ್ಥಾನದ ಬಳಿ ಬರುವಾಗ ಎದುರಿನಿಂದ ಬಂದ ಜೆಸಿಬಿ ಏಕಾಏಕಿ ಬೈಕ್‍ಗೆ ಗುದ್ದಿದೆ. ಘಟನೆಯಿಂದ ಅನಿತ್ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯರು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಹಿಂಬದಿ ಸವಾರ ನೂತನ್‍ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸಂಚಾರ ನಿಯಮ ಉಲ್ಲಂಘಿಸಿ ಏಕಮುಖ ರಸ್ತೆಯಲ್ಲಿ ಬಂದು ಬೈಕ್ ಡಿಕ್ಕಿ ಹೊಡೆದಿರುವ ಜೆಸಿಬಿ ಚಾಲಕ, ಘಟನೆ ಬಳಿಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics