ಬೆಂಗಳೂರು: ಪ್ರತಿ ವಾರ್ಡಿನಲ್ಲೂ ಚಲನಚಿತ್ರಗಳ ಭಿತ್ತಿಚಿತ್ರಗಳನ್ನು ಹಾಕಲು ಪೂರ್ವನಿಗದಿತ ಜಾಗ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ (ಕೆ ಎಫ್ ಸಿ ಸಿ) ಮನವಿ ಮಾಡಿದೆ.
ಮೇಯರ್ ಎನ್ ಶಾಂತಕುಮಾರಿ ಅವರನ್ನು ಕೆ ಎಫ್ ಸಿ ಸಿ ಸದಸ್ಯರು ಬುಧವಾರ ಅಭಿನಂದಿಸಿದರು. ಕೆ ಎಫ್ ಸಿ ಸಿ ಅಧ್ಯಕ್ಷ ಥಾಮಸ್ ಡಿಸೋಜಾ ಮಾತನಾಡಿ ಪ್ರತಿ ವರ್ಷ ಸುಮಾರು ೧೫೦ ಸಿನೆಮಾಗಳು ಬಿಡುಗಡೆಯಾಗುತ್ತವೆ, ಇದಕ್ಕಾಗಿ ನಿರ್ಮಾಪಕರು ಸುಮಾರು ೩೦೦ ಕೋಟಿಯಷ್ಟು ಹಣ ಹೂಡುತ್ತಾರೆ. ಆದರೆ ಇದರಲ್ಲಿ ಬರೀ ೭% ಮಾತ್ರ ಗೆಲ್ಲುವುದು. "ಟಿವಿ ಮತ್ತು ಪತ್ರಿಕೆಗಳಲ್ಲಿ ಸಿಗುವ ಪ್ರಚಾರ ತಾತ್ಕಾಲಿಕ. ಪೋಸ್ಟರ್ ಗಳ ಪ್ರಚಾರ ಬಹಳ ಪ್ರಭಾವ ಬೀರುತ್ತದೆ" ಎಂದಿದ್ದಾರೆ.
"ಆದುದರಿಂದ ಬಿಬಿಎಂಪಿ ಗೆ ಪ್ರತಿ ವಾರ್ಡಿನಲ್ಲಿ ಪೋಸ್ಟರ್ ಗಳನ್ನು ಅಂಟಿಸಲು ಪೂರ್ವ ನಿಯೋಜಿತ ಜಾಗಗಳನ್ನು ನಿಗದಿ ಮಾಡುವಂತೆ ಮನವಿ ಸಲ್ಲಿಸುತ್ತಿದ್ದೇವೆ. ಆ ಜಾಗಗಳಲ್ಲಿ ಮಾತ್ರ ನಾವು ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಿದ್ದೇವೆ" ಎಂದಿದ್ದಾರೆ.
ಯಾವ್ಯಾವ ಜಾಗದಲ್ಲಿ ಪೋಸ್ಟರ್ ಗಳನ್ನು ಅಂಟಿಸಬೇಕು ಎಂದು ಸ್ಥಳಗಳನ್ನು ಪಟ್ಟಿ ಮಾಡಲು ಮೇಯರ್ ಕೆ ಎಫ್ ಸಿ ಸಿಗೆ ಕೇಳಿದ್ದಾರೆ. "ನಂತರ ನಾನು ಅಧಿಕಾರಿಗಳ ಜೊತೆ ಚರ್ಚಿಸಲಿದ್ದೇನೆ" ಎಂದಿದ್ದಾರೆ.