ಪೌರ ಕಾರ್ಮಿಕರ ನೇಮಕಕ್ಕೆ ಪರ್ಯಾಯ ಮಾರ್ಗ
ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದಲ್ಲಿ...
ಬೆಂಗಳೂರು: ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಾಕಷ್ಟು ಆಕ್ಷೇಪಗಳಿವೆ.
ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ನೇಮಕಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು. ಹೊರ ಗುತ್ತಿಗೆ ಆಧಾರದಲ್ಲಿ ಸ್ವಚ್ಛತೆಗೆ ನೇಮಕವಾಗುವ ಪೌರ ಕಾರ್ಮಿಕರ ಮೇಲೆ ಸಾಕಷ್ಟು ಶೋಷಣೆ ನಡೆಯುತ್ತಿದೆ. ಸರಿಯಾಗಿ ಸಂಬಳ, ಸಾರಿಗೆ ಸಿಗುತ್ತಿಲ್ಲ. ಪಿಎಫ್, ಇಎಸ್‍ಐ ಸೌಲಭ್ಯಗಳಿಂದಲೂ ಅವರು ವಂಚಿತರಾಗುತ್ತಿದ್ದಾರೆಂಬ ದೂರುಗಳು ಸರ್ಕಾರದ ಗಮನಕ್ಕೂ ಬಂದಿವೆ. ಈ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಪದ್ಧತಿಯನ್ನು ನಿಲ್ಲಿಸಿ, ಪರ್ಯಾಯ ಮಾರ್ಗಗಳಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಯೋಚನೆ ನಡೆದಿದೆ.
ಯಾವುದಕ್ಕೂ ಕಾನೂನಿನ ನೆರವು ಪಡೆದು ಇದನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಫಿ ಎಸ್ಟೇಟ್ ಹಾಗೂ ಮನೆಗೆಲಸದ ಕಾರ್ಮಿಕರಿಗೂ ಮೂಲಸೌಲಭ್ಯ ಸಿಗಬೇಕಿದೆ. ಆದರೆ, ಸದ್ಯ ಅವರು ಅಸಂಘಟಿತ ವಲಯದಲ್ಲಿ ಬರುತ್ತಾರೆ. ಹೀಗಾಗಿ, ಮೊದಲು ಅಸಂಘಟಿತ ವಲಯದ ಕಾರ್ಮಿಕರ ಮಾಹಿತಿ ಕಲೆ ಹಾಕಬೇಕಿದೆ. ಆನಂತರ ಅವರಿಗೆ ಕಾರ್ಮಿಕ ಕಾನೂನಿನಡಿ ಮೂಲಸೌಲಭ್ಯ ನೀಡಬೇಕಿದೆ. ಕಾನೂನಿಗೆ ತಿದ್ದುಪಡಿಯಾಗಬೇಕಿರುವುದರಿಂದ ಇವೆಲ್ಲವೂ ಸ್ವಲ್ಪ ಕಷ್ಟವೇ. ಆದರೂ, ಕಾರ್ಮಿಕ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದರು.
ಸರ್ವೇ ಕಾರ್ಯ: ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಬಂಜಾರ ತಾಂಡಾಗಳಿವೆ. ಇವೆಲ್ಲವನ್ನು ಕಂದಾಯ ಗ್ರಾಮಗಳನ್ನಾಗಿ ಪರಿಗಣಿಸಿ, ಅಲ್ಲಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲಂಬಾಣಿ ಜನರ ಬಗ್ಗೆ ವಿಶೇಷ ಕಾಳಜಿ ತೋರಿ ತಾಂಡಾಗಳ ಸರ್ವೇ ಕಾರ್ಯಕ್ಕೆ ಸೂಚಿಸಿದ್ದಾರೆ. ಈಗಾಗಲೇ ಸರ್ವೇ ಕಾರ್ಯ ಶೇ. 70 ರಷ್ಟು ಪ್ರಗತಿ ಕಂಡಿದೆ. ಉಳಿದದ್ದು ಶೀಘ್ರವೇ ಪೂರ್ಣವಾಗಲಿದೆ ಎಂದು ಪರಮೇಶ್ವರ ನಾಯ್ಕ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.