ಬೆಂಗಳೂರು: ಎರಡು ಖಾಕಿ ಇಲಾಖೆಗೆ ಒಂದೇ ದಿನ ನೇಮಕ ಪರೀಕ್ಷೆ ನಡೆಸಲು ಸರ್ಕಾರ ದಿನಾಂಕ ನಿಗದಿಪಡಿಸಿರುವುದು ಉದ್ಯೋಗಾಕಾಂಕ್ಷಿ ಯುವಕರನ್ನು ಗೊಂದಲಕ್ಕೆ
ನೂಕಿದೆ. ರಾಜ್ಯ ಮೀಸಲು ಪೋಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆ ಮತ್ತು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ (ಆರ್ ಎಫ್ ಓ) ಹುದ್ದೆಗೆ ಸರ್ಕಾರ ಒಂದೇ ದಿನ ಪರೀಕ್ಷೆ ನಿಗದಿಗೊಳಿಸಿದೆ. ಫೆ 15ರಂದು ಎರಡೂ ಹುದ್ದೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಎರಡೂ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವವರು ಕಂಗಾಲಾಗಿದ್ದಾರೆ.ಒಂದೇ ದಿನ ಎರಡು ಪರೀಕ್ಷೆ ನಿಯೋಜನೆ ಮಾಡಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಅಲ್ಲಲ್ಲಿ ಅಹವಾಲುಗಳು ಸಲ್ಲಿಕೆಯಾಗಿದೆ. ಆದರೆ ಸರ್ಕಾರ ಮಾತ್ರ ಹೋದರೆ ಹೋಗಲಿ ಎಂಬಂತೆ ವರ್ತಿಸುತ್ತಿದೆ. ಈ ವಿಚಾರದಲ್ಲಿ ಎರಡೂ ಇಲಾಖೆ ಮಧ್ಯೆ ಔಪಚಾರಿಕವಾಗಿಯೂ ಮಾತುಕತೆ ನಡೆದಿಲ್ಲ. ಇದರಿಂದ ಸರ್ಕಾರದ ಎರಡು ಮಹತ್ವದ ಇಲಾಖೆ ಮಧ್ಯೆ ಇರುವ ಹೊಂದಾಣಿಕೆ ಎಂಥದ್ದು ಎಂಬುದೂ ಅನಾವರಣಗೊಂಡಿದೆ.
ಏನೀ ಗೊಂದಲ?: ಅರಣ್ಯ ಇಲಾಖೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಸಿಬ್ಬಂದಿ ಕೊರತೆ ಇದೆ. ವನಪಾಲಕರಿಂದ ವಲಯ ಅರಣ್ಯಾ„ಕಾರಿಗಳವರೆಗೆ ಹೆಚ್ಚಿನ ಕೊರತೆಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 100 ಆರ್ ಎಫ್ ಓ ಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಅಕ್ಟೋಬರ್ 29, 2014ರಂದು ಅಧಿಸೂಚನೆ ಹೊರಡಿಸಿ ಆನ್ಲೈನ್ ಹಾಗೂ ನೇರ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿಗಳ ಪರಿಶೀಲನೆ ಮುಕ್ತಾಯಗೊಂಡ ನಂತರ ಅಭ್ಯರ್ಥಿಗಳಿಗೆ ಫೆಬ್ರವರಿ 15ರಂದು ಸಾಮಾನ್ಯ ಜ್ಞಾನ ಮತ್ತು ಅಪ್ಟಿಟ್ಯೂಡ್ ಪರೀಕ್ಷೆ ನಿಗದಿಗೊಳಿಸಲಾಗಿದೆ. ಬೆಳಗ್ಗೆ 10ರಿಂದ 12ರವರೆಗೆ ಸಾಮಾನ್ಯ ಜ್ಞಾನ, ಮಧ್ಯಾಹ್ನ 2ರಿಂದ 4ರವರೆಗೆ ಅಪ್ಟಿಟ್ಯೂಡ್ ಪರೀಕ್ಷೆ ನಡೆಯುತ್ತದೆ.
ಆದರೆ ಅದೇ ದಿನ (ಫೆ 15 ) ರಂದು ಕರ್ನಾಟಕ ಮೀಸಲು ಪೊಲೀಸ್ ಪಡೆಯ 60 ಸಬ್ಇನ್ಸ್ಪೆಕ್ಟರ್ ಹುದ್ದೆ ನೇಮಕಕ್ಕೆ ಪರೀಕ್ಷೆ ನಡೆಯುತ್ತದೆ. ಹೀಗಾಗಿ ಎರಡೂ ಹುದ್ದೆಗೆ ಅರ್ಜಿ ಸಲ್ಲಿಸಿದವರು ಯಾವುದಕ್ಕೆ ಆದ್ಯತೆ ನೀಡಬೇಕೆಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಯಾವುದೇ ನೇಮಕ ಪರೀಕ್ಷೆ ನಡೆಸುವಾಗ ಎಲ್ಲ ಇಲಾಖೆ ಮಧ್ಯೆ ಪತ್ರ ವ್ಯವಹಾರ ನಡೆಯಬೇಕು. ಆದರೆ ಇಲ್ಲಿ ಅದ್ಯಾವುದು ನಡೆದಂತೆ ಕಾಣುತ್ತಿಲ್ಲ. ಒಂದೊಮ್ಮೆ ಮುಂಚಿತವಾಗಿ ಈ ಪ್ರಕ್ರಿಯೆ ನಡೆದಿದ್ದರೆ ಗೊಂದಲಕ್ಕೆ ಅವಕಾಶ ಇರುತ್ತಿರಲಿಲ್ಲ.
ವಲಯ ಅರಣ್ಯಾಧಿ ಕಾರಿ ಹುದ್ದೆಗೆ ನೇಮಕ ಪರೀಕ್ಷೆ ನಡೆಯುತ್ತಿದೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಅರಣ್ಯ ಇಲಾಖೆಯಿಂದ ಇದುವರೆಗೆ ಯಾವುದೇ
ಪ್ರತಿನಿಧಿಕ ಸಂದೇಶ ಬಂದಿಲ್ಲ.
- ರಾಘವೇಂದ್ರ ಔರಾದ್ಕರ್,
ನೇಮಕ ಮತ್ತು ತರಬೇತಿ ವಿಭಾಗದ
ಹೆಚ್ಚುವರಿ ಪೊ ಲೀಸ್ ಮಹಾನಿರ್ದೇಶಕ