ಬೆಂಗಳೂರು: ಪ್ರತಿಯೊಬ್ಬ ಭಾರತೀಯನೂ ಇಂದು ದೇಶಪ್ರೇಮಿಯಾಗಬೇಕಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊಂದು ದಿನ ಭಾರತ ಸಂಪೂರ್ಣ ಇಸ್ಲಾಮೀಕರಣ ಅಥವಾ ಕ್ರಿಶ್ಚಿಯನೀಕರಣವಾಗುತ್ತದೆ ಎಂದು ಖ್ಯಾತ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಆತಂಕ ವ್ಯಕ್ತಪಡಿಸಿದರು.
ವಸಂತ ಪ್ರಕಾಶನದಿಂದ ನ್ಯಾಷನಲ್ ಕಾಲೇಜಿನ ಮಲ್ಟಿಮಿಡಿಯಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ರಾಜೀವ್ ಮಲ್ಹೋತ್ರಾ, ಅರವಿಂದನ್ ನೀಲಕಂಡನ್ ಅವರ `ಬ್ರೇಕಿಂಗ್ ಇಂಡಿಯಾ' ಎಂಬ ಅನುವಾದಿತ ಕನ್ನಡ ಕೃತಿ `ಭಾರತ ಭಂಜನ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಭಾರತೀಯರಿಂದು ಹಿಂದೂಗಳೆಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದಾರೆ. ಇದು ಹೀಗೇ ಮುಂದುವರಿದಲ್ಲಿ ನಮ್ಮ ರಾಷ್ಟ್ರ ಉಳಿಯುವುದು ಅನುಮಾನ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಅಥವಾ ದೇಶಪ್ರೇಮ ಮೂಡಿಸಿಕೊಳ್ಳದಿದ್ದಲ್ಲಿ ಭಾರತ ನಮ್ಮ ಕೈತಪ್ಪಲಿದೆ ಎಂದರು.
ಭಾರತ ಎಂಬುದು ಇಂಡಿಯಸ್ತಾನ, ಇಂಡಸ್ತಾನ ಎಂಬಿತ್ಯಾದಿ ಹೆಸರುಗಳಿಂದ ನಾಮಕರಣಗೊಳ್ಳುತ್ತದೆ. ಹಾಗಾಗಿ ಪ್ರತಿಯೊಬ್ಬ ಹಿಂದೂ ಎಚ್ಚೆತ್ತುಕೊಳ್ಳಬೇಕು. ಭಾರತ ಸಂವಿಧಾನವನ್ನು ಮತ್ತೆ ತಿದ್ದುಪಡಿ ಮಾಡಿ, ಇಂಡಿಯಾ ಎಂದು ಇರುವುದನ್ನು ಭಾರತ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು. ಇಂಡಿಯಾ ಎಂಬುದನ್ನು ತೆಗೆದು ಭಾರತ್ ಈಸ್ ಯೂನಿಯನ್ ಆಫ್ ಸ್ಟೇಟ್ಸ್ ಎಂದು ತಿದ್ದುಪಡಿ ತರುವ ಅಗತ್ಯವಿದೆ. ಇಲ್ಲವಾದಲ್ಲಿ ಕ್ರೈಸ್ತರು, ದ್ರಾವಿಡರು ಎಂಬಿತ್ಯಾದಿ ಹೆಸರುಗಳನ್ನು ಬಳಿಸಿ ಭಾರತವನ್ನು ವಿಭಜನೆ ಮಾಡುತ್ತಾರೆ. ಆರ್ಯನ್ ಸಂಸ್ಕೃತಿ ಹಾವಳಿಯಿಂದ ದ್ರಾವಿಡನ್ ಸಂಸ್ಕೃತಿ ಮತ್ತಷ್ಟು ಛಿದ್ರವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಂತಕ ಡಾ.ಎಸ್. ಆರ್.ರಾಮಸ್ವಾಮಿ, ವೈಚಾರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ನಾವು ಹೆಚ್ಚು ಪ್ರಬಲರಾಗಬೇಕು. ಆಗ ಹಿಂದೂಗಳನ್ನು ಯಾರೂ ತುಳಿಯಲು ಸಾಧ್ಯವಿಲ್ಲ. ಹಿಂದೂ ಧರ್ಮ ಮೃದು ಧರ್ಮವಾಗಿದ್ದು, ಬೇರೆ ಧರ್ಮಗಳು ಜನಾಂಗೀಯವಾಗಿ ಅದನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿವೆ ಎಂದರು. ಭಾರತ ಭಂಜನ ಸಂಪಾದಕ ಡಾ.ರ.ವಿ.ಜಹಾಗೀರದಾರ ಪುಸ್ತಕ ಕುರಿತು ಮಾತನಾಡಿದರು. ಲೇಖಕರಾದ ರಾಜೀವ್ ಮಲ್ಹೋತ್ರ, ಲಕ್ಷ್ಮಿಕಾಂತ ಹೆಗಡೆ, ವಸಂತ ಪ್ರಕಾಶನದ ಮುರಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.