ಬೆಳ್ತಂಗಡಿ: ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ನಿಲುಗಡೆ ಮಾಡಿರುವ ಕಾರಣ ಪರ್ಯಾಯ ಮಾರ್ಗ ಚಾರ್ಮಾಡಿ ಕಣಿವೆಯಲ್ಲಿನ ಘಾಟ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಅತಿಯಾದ ವಾಹನಗಳ ಓಡಾಟದಿಂದ ಶುಕ್ರವಾರ ಸಂಜೆ ನೂರಾರು ವಾಹನಗಳು ಚಾರ್ಮಾಡಿ ಘಾಟ್ 4ನೇ ತಿರುವಿನಲ್ಲಿ ತಾಸು ಗಟ್ಟಲೆ ನಿಲ್ಲಬೇಕಾಯಿತು. ಅಡ್ಡಾದಿಡ್ಡಿ ನುಗ್ಗಿಸಿದ, ಸಂಚಾರ ನಿಯಮಗಳನ್ನು ಪಾಲಿಸದ ಮತ್ತು ಅವಸರದ ಕಾರಣ ವಾಹನಗಳು ಕಡಿದಾದ ರಸ್ತೆಯಲ್ಲಿ ನಿಲ್ಲಬೇಕಾಯಿತು.
ಇದರಿಂದ ಸಂಚಾರ ಬಂದ್ ಉಂಟಾಯಿತು. ಕಕ್ಕಿಂಜೆಯಿಂದ ಮೂಡಿಗೆರೆಯ ತನಕ ವಾಹನಗಳ ಸಾಲು ಕಂಡು ಬಂದಿದ್ದು ನಿಧಾನ ಗತಿಯಲ್ಲಿ ಮುಂದೆ ಚಲಿಸಬೇಕಾಯಿತು.
ಜ.1ರಿಂದ ಶಿರಾಡಿ ಮಾರ್ಗ ಬಂದ್ ಆಗಿರುವ ಕಾರಣ ಬೆಂಗಳೂರು ಮತ್ತಿತರ ಪ್ರದೇಶಗಳಿಂದ ಬರುವ ಮತ್ತು ಹೋಗುವ ವಾಹನಗಳು ಚಾರ್ಮಾಡಿ ಘಾಟ್ ರಸ್ತೆ ಅವಲಂಬಿಸುತ್ತಿವೆ.
ಇದರಿಂದ ರಸ್ತೆ ಮೇಲೆ ವಾಹನ ಓಡಾಟ ಹೆಚ್ಚುತ್ತಿದ್ದು ಶಿರಾಡಿ ಮಾರ್ಗ ದುರಸ್ತಿಯಾಗುವ ತನಕ ಪ್ರತಿನಿತ್ಯ ಬ್ಲಾಕ್ ಆಗುವ ಸಂಭವ ಕಂಡು ಬರುತ್ತಿದೆ. ಸುಮಾರು 11 ಕಿ.ಮೀ. ಇರುವ ಚಾರ್ಮಾಡಿ ಘಾಟ್ ರಸ್ತೆ 11 ಹೆರ್‌ಪಿನ್ ತಿರುವು ಹೊಂದಿದ್ದು ಕಡಿದಾಗಿ ದುರ್ಗಮವಾಗಿದೆ.