ನವದೆಹಲಿ: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 20ಕ್ಕೆ ಮುಂದೂಡಿದೆ.
ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಾಳೆಯೇ ನಡೆಸಲು ರೆಡ್ಡಿ ಪರ ವಕೀಲರು ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ರೆಡ್ಡಿ ಪರ ವಕೀಲರ ಮನವಿಯನ್ನು ತಿರಸ್ಕರಿಸಿದ ನ್ಯಾ.ಎಚ್.ಎಲ್.ದತ್ತು ವಿಚಾರಣೆ ಮುಂದೂಡಿದರು.
ಈ ಹಿಂದೆ ಜನಾರ್ದನ ರೆಡ್ಡಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಲು ಸಿಬಿಐ ಒಪ್ಪಿ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿತ್ತು.
ರೆಡ್ಡಿ ಅವರು ಪಾಸ್‌ಪೋರ್ಟ್ ಒಪ್ಪಿಸಬೇಕು. ವಿಚಾರಣೆಗೆ ತಪ್ಪದೇ ಹಾಜರಾಗಬೇಕು, ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಬಾರದು ಮತ್ತು ಬಳ್ಳಾರಿಯಲ್ಲಿ ತಂಗಬಾರದು ಮುಂತಾದ ಷರತ್ತುಗಳ ಆಧಾರದ ಮೇಲೆ ಸಿಬಿಐ ಜಾಮೀನಿಗೆ ಒಪ್ಪಿಕೊಂಡಿತ್ತು. ಆದರೆ ರೆಡ್ಡಿ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿರುವುದರಿಂದ ಅವರಿಗೆ ಬಿಡುಗಡೆ ಭಾಗ್ಯವಿನ್ನು ಸಿಗದೇ ಜೈಲಿನಲ್ಲೇ ಕಾಲಕಳೆಯುವಂತಾಗಿದೆ.