ಚುನಾವಣಾ ಆಯೋಗಕ್ಕೆ ಮಾಹಿತಿ ಮರೆಮಾಚಿದ ಆರೋಪ 
ಜಿಲ್ಲಾ ಸುದ್ದಿ

ಮುಚ್ಚಿಟ್ಟ ಆಸ್ತಿ ವಿವರ: 'ಲೋಕಾ'ಕ್ಕೆ 'ಮುನಿ'ಸು

ಚುನಾವಣೆ ವೇಳೆ ಸಲ್ಲಿಸಿದ್ದ ದಾಖಲೆಯಲ್ಲಿ 2 ಆಸ್ತಿ ವಿವರ ಬಚ್ಚಿಟ್ಟ ಶಾಸಕ ಮುನಿರತ್ನ...

ಬೆಂಗಳೂರು: ತಮಗೆ ಸೇರಿದ ಮನೆಯಲ್ಲಿ ಬಿಬಿಎಂಪಿ 'ಕಡತಯಜ್ಞ' ನಡೆಸಲು ಅವಕಾಶ ನೀಡಿ ವಿವಾದ ಸೃಷ್ಟಿಸಿದ್ದ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಈಗ ಚುನಾವಣಾ ಆಯೋಗಕ್ಕೆ ಮಾಹಿತಿ ಮರೆಮಾಚಿದ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸುವ ಸಂದರ್ಭದಲ್ಲಿ ಈ ತಪ್ಪೆಸಗಿರುವುದು ಲೋಕಾಯುಕ್ತ ತನಿಖೆ ವೇಳೆ ಬೆಳಕಿಗೆ ಬಂದಿದೆ. ದಾಖಲೆ ಬಚ್ಚಿಟ್ಟ ಆರೋಪದ ಜತೆಗೆ ಈಗ ಆಸ್ತ ಬಚ್ಚಿಟ್ಟ ಪ್ರಕರಣ ಮುನಿರತ್ನ ಅವರಿಗೆ ತಗುಲಿಕೊಂಡಿದೆ.

ಹೀಗಾಗಿ ಕಡತ ವಿಲೇವಾರಿ ಪ್ರಕರಣದಲ್ಲಿ 'ನಾನೇನೂ ಮಾಡ್ಲಿಲ್ಲ, ನಂದೇನೂ ತಪ್ಪಿಲ್ಲ' ಎಂದು ರಾಗ ಹಾಡುತ್ತಿರುವ ಮುನಿರ್ತನ ಮಹೋದಯರು ಈಗೇನು ಮಾಡುತ್ತಾರೆಂಬ ಪ್ರಶ್ನೆ ಕಾಡುತ್ತಿದೆ.

ಪತ್ತೆಯಾಗಿದ್ದು ಯಾವಾಗ? ಖಾಸಗಿ ಕಟ್ಟಡದಲ್ಲಿ ಬಿಬಿಎಂಪಿ ಕಡತ ವಿಲೇವಾರಿಯಾಗುತ್ತಿದೆ ಎಂಬ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳ ಮುನಿರತ್ನ ಅವರಿಗೆ ಸೇರಿದ ಕಟ್ಟಡದ ಮೇಲೆ ದಾಳಿ ನಡೆಸಿ 1000ಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನು ಆಧರಿಸಿ ಶಾಸಕರು ಮುಚ್ಚಿಟ್ಟಿದ್ದೇನು? ಬಚ್ಚಿಟ್ಟಿದ್ದೇನು? ಎಂಬ ಸತ್ಯಶೋಧನೆಗೆ ಇಳಿದ ಲೋಕಾಯುಕ್ತ ಅಧಿಕಾರಿಗಳಿಗೆ ಚುನಾವಣಾ ಆಯೋಗಕ್ಕೆ ಸೂಕ್ತ ಮಾಹಿತಿ ನೀಡದಿರುವ ವಿಚಾರ ಮೊದಲ ಹಂತದಲ್ಲಿಯೇ ಪತ್ತೆಯಾಗಿದೆ.

ಚುನಾವಣಾ ಆಯೋಗಕ್ಕೆ ಅವರು ತಮ್ಮ ಹೆಸರಿನಲ್ಲಿ 18 ಆಸ್ತಿಗಳಿವೆ ಎಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ ವೈಯಾಲಿಕಾವಲ್‌ನಲ್ಲಿ ತಮ್ಮ ಹಾಗೂ ಪತ್ನಿ ಹೆಸರಿನಲ್ಲಿರುವ ಎರಡು ಆಸ್ತಿಗಳನ್ನು ಬಚ್ಚಿಟ್ಟಿದ್ದಾರೆ. ವೈಯಾಲಿಕಾವಲ್‌ನ ಆಸ್ತಿ ಸಂಖ್ಯೆ 5-88-147ನಲ್ಲಿರುವ 3478 ಚದರ ಅಡಿ ವಿಸ್ತೀರ್ಣದ ಮನೆ, ಬಿಬಿಎಂಪಿ ಖಾತೆ ನಂಬರ್ 5-88-146/3 ರಲ್ಲಿ 723 ಚದುರ ಅಡಿ ಮನೆ ಹೊಂದಿರುವ ವಿಚಾರವನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ.

2000 ದಿಂದ 2012ರಲ್ಲಿ ಈ ಆಸ್ತಿಗಳನ್ನು ಖರೀದಿಸಿದ್ದು, ಆಗಿನ್ನೂ ಮುನಿರತ್ನ ಶಾಸಕರಾಗಿರಲಿಲ್ಲ. ಆದರೆ 2013ರಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.

ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿ ಚುನಾವಣಾ ಕಣಕ್ಕಿಳಿಯುವಾಗ ಕಡ್ಡಾಯವಾಗಿ ತನ್ನ ಹಾಗೂ ಕುಟುಂಬ ಸದಸ್ಯರ ಆಸ್ತಿಯನ್ನು ಆಯೋಗಕ್ಕೆ ಸಲ್ಲಿಸಬೇಕು. ಯಾವುದೇ ವಿಚಾರವನ್ನು ಮುಚ್ಚಿಡುವುದು ಕಾನೂನು ಪ್ರಕಾರ ದಂಡನಾರ್ಹ ಅಪರಾಧವಾಗುತ್ತದೆ. ಆದರೂ ಮುನಿರತ್ನ ಆವರು ಮಾತ್ರ ಎರಡು ಆಸ್ತಿಯನ್ನು ಬಚ್ಚಿಟ್ಟಿದ್ದಾರೆ.

ಲೋಕಾಯುಕ್ತ ಎಂದರೆ ಮುನಿಗೆ ಅಲರ್ಜಿ: ಕುತೂಹಲಕಾರಿ ಸಂಗತಿ ಎಂದರೆ ಈ ವಿಚಾರ ಬೆಳಕಿಗೆ ಬರುತ್ತಿರುವುದು ಲೋಕಾಯುಕ್ತ ತನಿಖೆಯಿಂದ. ಆದರೆ ಲೋಕಾಯುಕ್ತ ಸಂಸ್ಥೆ ಎಂದರೆ ಮುನಿರತ್ನ ಅವರಿಗೆ ಎಲ್ಲಿಲ್ಲದ ಭಯ.

ಇದಕ್ಕೆ 'ಪೂರ್ವ ಕಾಮಗಾರಿ' ಸೋಂಕು ಉಂಟು. ಈ ಹಿಂದೆ ನ್ಯಾ.ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಲೂ ಮುನಿರತ್ನ ಲೋಕಾಯುಕ್ತದ ಅಡಗತ್ತರಿಯಲ್ಲಿ ಸಿಲುಕಿಕೊಂಡಿದ್ದರು.

ಕಳಪೆ ಕಾಮಗಾರಿ ಕುಸಿದು ವಿದ್ಯಾರ್ಥಿನಿ ಮೃತಪಟ್ಟಾಗ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡ ಲೋಕಾಯುಕ್ತ, ತನಿಖೆಗೆ ಆದೇಶಿಸಿತ್ತು. ಆಗ ಎದ್ದೇನೋ ಬಿದ್ದೆನೋ ಎಂದು ಲೋಕಾಯುಕ್ತ ಕಚೇರಿಗೆ ಬಂದಿದ್ದ ಮುನಿರತ್ನ ಈಗಿನ ಶೈಲಿಯಲ್ಲೇ 'ನಂದೇನೂ ತಪ್ಪಿಲ್ಲ, ನಾನೇನೂ ಮಾಡ್ಲಿಲ್ಲ' ಎಂದು ಅಂಗಲಾಚಿದ್ದರು.

ಅದ್ಯಾವುದೋ ಮಾಯದಲ್ಲಿ ಈ ಪ್ರಕರಣದಿಂದ ಬಚಾವ್ ಆಗಿದ್ದ ಅವರು ಮತ್ತೆ ಲೋಕಾಯುಕ್ತ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಏನೇ ಆದರೂ ಮುನಿರತ್ನ ಚಾಲು ಮಾತಿನ ಮೂಲಕ ಸ್ಪಷ್ಟೀಕರಣ ನೀಡುವುದರಲ್ಲಿ ಎತ್ತಿದ ಕೈ. ಈಗ ಆಸ್ತಿ ಬಚ್ಚಿಟ್ಟ ಪ್ರಕರಣದಲ್ಲಿ ಅವರ ಸ್ಪಷ್ಟೀಕರಣ ಭರಾಟೆ ಹೇಗಿರುತ್ತದೋ ದೇವರೇ ಬಲ್ಲ.


-ರಾಘವೇಂದ್ರ ಭಟ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT