ಮಂಗಳೂರು: ಮಂಗಳೂರಿನ ಮಂದಿ ಅಮೆರಿಕದ ವೈಟ್‌ಹೌಸ್‌ಗೂ ತಲುಪಿದ್ದಾರೆ. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಬಂದಿದ್ದ ಅಮೆರಿಕ ಅಧ್ಯ.ಕ್ಷ ಬರಾಕ್ ಒಬಾಮ ಅವರ ತಂಡದಲ್ಲಿ ಮಂಗಳೂರು ಮೂಲದ ಓರ್ವ ಯುವತಿಯೂ ಇದ್ದರು...!
ಉಡುಪಿ ತಾಲೂಕಿನ ಪೆರ್ಡೂರು ಮೂಲದ ಶಿಲ್ಪಾ ಹೆಗ್ಡೆ ಎಂಬ ಯುವತಿ ಅಮೆರಿಕ ಅಧ್ಯಕ್ಷರ ಅಧಿಕೃತ ಗೃಹ ಕಚೇರಿ ವೈಟ್‌ಹೌಸ್‌ನಲ್ಲಿ ಹಿರಿಯ ಸಹಾಯಕ ಸಿಬ್ಬಂದಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಒಬಾಮ ಭಾರತ ಭೇಟಿ ವೇಳೆ ಆಗಮಿಸಿದ್ದ ಅಮೆರಿಕದ ಅಧಿಕಾರಿಗಳ ತಂಡದಲ್ಲಿದ್ದರು.
ಒಬಾಮ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಲ್ಪಾ ಅನಿವಾಸಿ ಭಾರತೀಯಳಾಗಿದ್ದು, ಅವರ ತಂದೆ ಸದಾನಂದ ಹೆಗ್ಡೆ ಹಾಗೂ ತಾಯಿ ವಿದ್ಯಾ ಅಮೆರಿಕದ ಖ್ಯಾತ ವೈದ್ಯರಾಗಿದ್ದಾರೆ. ಅಮೆರಿಕದಲ್ಲೇ ಹುಟ್ಟಿ ಬೆಳೆದ ಶಿಲ್ಪಾ ರಾಜಕೀಯಕ್ಕೆ ಸೇರಿ, 2008ರಲ್ಲಿ ಒಬಾಮ ಪರ ಪ್ರಚಾರ ಸಹ ಮಾಡಿದ್ದರು.
ಅಮೆರಿಕದಲ್ಲಿ ಕಾನೂನು ಶಿಕ್ಷಣ ಪಡೆದಿರುವ ಶಿಲ್ಪಾ, 2009ರಲ್ಲಿ ಅಟ್ಲಾಸ್ ಯೋಜನೆಯಲ್ಲಿ ಸಂಸೋಧಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ ಅದೇ ವರ್ಷ ವೈಟ್‌ಹೌಸ್ ಸಹಾಯಕ ನಿರ್ದೇಶಕಿಯಾಗಿ ನೇಮಕಗೊಂಡರು. ಬಳಿಕ ಹಿರಿಯ ಸಹಾಯಕ ಸಿಬ್ಬಂದಿ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು.
ಶಿಲ್ಪಾ ಹೆಗ್ಡೆ ಹುಟ್ಟಿದ್ದು ಅಮೆರಿಕದಲ್ಲಾದರೂ ಅವರು ತುಳು ಭಾಷೆಯ ಕುರಿತು ಅವರಿಗೆ ಪ್ರೀತಿ ಇದೆ. ಅಲ್ಲದೆ ಅವರು ತುಳುವಿನಲ್ಲಿ ಮಾತನಾಡಲು ಯತ್ನಿಸುತ್ತಾರೆ ಎಂದು ಮಂಗಳೂರಿನಲ್ಲಿರುವ ಅವರ ಸಂಬಂಧಿ ಡಾ.ಸುಭಾಸ್‌ಚಂದ್ರ ಶೆಟ್ಟಿ ಅವರು ಹೇಳಿದ್ದಾರೆ.