ಸಂಪ್‍ಗೆ ಬಿದ್ದು ಬಾಲಕ ಸಾವು
ಪಾಳುಬಿದ್ದ ಕಾರ್ಖಾನೆ ಆವರಣದಲ್ಲಿದ್ದ ನೀರಿನ ಸಂಪ್‍ಗೆ ಆಕಸ್ಮಿಕವಾಗಿ ಬಿದ್ದು 8 ವರ್ಷದ ಬಾಲಕ...
ಬೆಂಗಳೂರು: ಪಾಳುಬಿದ್ದ ಕಾರ್ಖಾನೆ ಆವರಣದಲ್ಲಿದ್ದ ನೀರಿನ ಸಂಪ್‍ಗೆ ಆಕಸ್ಮಿಕವಾಗಿ ಬಿದ್ದು 8 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕೋರಮಂಗಲ 5ನೇ ಹಂತದಲ್ಲಿ ಶನಿವಾರ ನಡೆದಿದೆ.
ಕಲಬುರಗಿ ಮೂಲದ ಸಂತೋಷ್ ಮತ್ತು ದೇವಿಕಮ್ಮ ದಂಪತಿ ಮಗ ಅಭಿಷೇಕ್ ಮೃತಪಟ್ಟವ. ಕೂಲಿ ಕಾರ್ಮಿಕರಾದ ಸಂತೋಷ್ ದಂಪತಿ ಆಡುಗೋಡಿ ರಾಜೇಂದ್ರನಗರದಲ್ಲಿ ತಾತ್ಕಾಲಿಕ ಶೆಡ್‍ನಲ್ಲಿ ವಾಸವಿದ್ದಾರೆ. ಬಾಲಕ ಅಭಿಷೇಕ್, ಸಮೀಪದ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. 5 ವರ್ಷಗಳಿಂದ ಕಾರ್ಖಾನೆ ಮುಚ್ಚಿತ್ತು. ಮಾಲೀಕರು ಪುನರಾರಂಭ ಮಾಡಲು ಉದ್ದೇಶಿಸಿದ್ದರು. ಹೀಗಾಗಿ ಸ್ವಚ್ಛಗೊಳಿಸಲು ಸಂತೋಷ್ ದಂಪತಿಗೆ ಹೇಳಿದ್ದರು.
ಮಧ್ಯಾಹ್ನ 3 ಗಂಟೆಗೆ ಕಾರ್ಖಾನೆ ಬಳಿ ಬಂದಿದ್ದ ದಂಪತಿ ಅಭಿಷೇಕ್‍ನನ್ನು ಆವರಣದಲ್ಲಿ ಆಟವಾಡಲು ಬಿಟ್ಟು ಕಾರ್ಖಾನೆ ಸ್ವಚ್ಛಗೊಳಿಸುತ್ತಿದ್ದರು. ಕಾರ್ಖಾನೆ ಆವರಣದಲ್ಲಿ ಸುಮಾರು 10 ಅಡಿ ಆಳದ ನೀರಿನ ಸಂಪು ನಿರ್ಮಿಸಲಾಗಿದೆ. ಅದಕ್ಕೆ ಮೂರು ಕಡೆ ಮುಚ್ಚಳ ನಿರ್ಮಿಸಲಾಗಿದೆ. ಹಲವು ವರ್ಷಗಳಿಂದ ಬಳಕೆಯಲ್ಲಿ ಇಲ್ಲದ್ದರಿಂದ ನಿರ್ವಹಣೆಯೂ ಇರಲಿಲ್ಲ, ಅದಕ್ಕೆ ಮುಚ್ಚಳವೂ ಇರಲಿಲ್ಲ. ಆಟವಾಡುತ್ತಿದ್ದ ಅಬಿsಷೇಕ್ ನೀರಿನ ಸಂಪ್ ಬಳಿ ಹೋಗಿ ಆಕಸ್ಮಿಕವಾಗಿ ಒಳಗೆ ಬಿದ್ದು ಮೃತಪಟ್ಟಿದ್ದಾನೆ.
ಕೆಲಸ ಮುಗಿಸಿದ ದಂಪತಿ ಆಟವಾಡುತ್ತಿದ್ದ ಮಗ ಕಾಣದಿದ್ದಾಗ ಗಾಬರಿಗೊಂಡು ಸುತ್ತಮುತ್ತ ಹುಡುಕಾಟ ನಡೆಸಿದರು. ಪತ್ತೆಯಾಗದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸಂಪಿನಲ್ಲಿ ಹುಡುಕಾಟ ನಡೆಸಿದಾಗ ಅಭಿಷೇಕ್ ಶವ ಪತ್ತೆಯಾಗಿದೆ. ಕಾರ್ಖಾನೆ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.