ಬ್ಯಾಟರಾಯನಪುರ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಮೈಸೂರು ರಸ್ತೆ ಬ್ಯಾಟರಾಯನ ಪುರದಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆ ಬಳಿ ವೃಷಭಾವತಿ...
ಬೆಂಗಳೂರು: ಮೈಸೂರು ರಸ್ತೆ ಬ್ಯಾಟರಾಯನ ಪುರದಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆ ಬಳಿ ವೃಷಭಾವತಿ ಕಾಲುವೆಯ ಸೇತುವೆ ಕೆಡವಿ ನೂತನ ಸೇತುವೆ ನಿರ್ಮಿಸಲು ಬಿಬಿಎಂಪಿ ಮುಂದಾಗಿದ್ದು ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.
ಫೆ.3ರಿಂದ ಕಾಮಗಾರಿ ಆರಂಭಗೊಳ್ಳಲಿದ್ದು ಮುಕ್ತಾಯವಾಗುವವರೆಗೂ ಪರ್ಯಾಯ ಮಾರ್ಗ ಚಾಲ್ತಿಯಲ್ಲಿರಲಿದೆ. ನೂತನ ಸೇತುವೆ ನಿರ್ಮಾಣವಾಗಲು 6 ತಿಂಗಳ ಕಾಲಾವಕಾಶ ಬೇಕು ಎನ್ನಲಾಗಿದೆ.
ಪರ್ಯಾಯ ವ್ಯವಸ್ಥೆ
ಮೈಸೂರು ಕಡೆಯಿಂದ ಸಿರ್ಸಿ ವೃತ್ತದ ಕಡೆಗೆ ಬರುವ ವಾಹನಗಳು ಕಿಂಕೋ ಜಂಕ್ಷನ್ ಬಳಿ ಎಡ ತಿರುವು ಪಡೆದು ದೀಪಾಂಜಲಿ ನಗರದ ಬಳಿ ಬಲ ತಿರುವು ಪಡೆದು ಹೊಸದಾಗಿ ನಿರ್ಮಿಸಿರುವ ಸೇತುವೆ ಮೂಲಕ ಬಾಪೂಜಿನಗರ ಜಂಕ್ಷನ್ ಬಳಿ ಮೈಸೂರು ರಸ್ತೆಯನ್ನು ಸೇರಿ ಮುಂದುವರಿಯಬೇಕು.
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ವಿಜಯನಗರದ ಕಡೆಯಿಂದ ಮೈಸೂರು ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು ದೀಪಾಂಜಲಿ ನಗರದ ಬಳಿ ಹೊಸದಾಗಿ ನಿರ್ಮಿಸಿರುವ ಸೇತುವೆಯ ಮೇಲೆ ಎಡ ತಿರುವು ಪಡೆದು ಬಾಪೂಜಿನಗರ ಜಂಕ್ಷನ್ ಬಳಿ ಮೈಸೂರು ರಸ್ತೆಯನ್ನು ಸೇರಿ ಸಂಚರಿಸಬಹುದಾಗಿದೆ.
ಹೊಸಕೆರೆ ಹಳ್ಳಿ, ಬ್ಯಾಟರಾಯನಪುರ, ಬನಶಂಕರಿ ಕಡೆಗೆ ಸಾಗುವ ವಾಹನಗಳು ಮೈಸೂರು ರಸ್ತೆ ಕೆಎಸ್ಆರ್ಟಿಸಿ ಜಂಕ್ಷನ್ ಬಳಿ `ಯು' ತಿರುವು ಪಡೆದು ಬೇಕಾದ ಮಾರ್ಗಗಳಲ್ಲಿ ಮುಂದುವರಿಯಬಹುದು. ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕಿಂಕೋ ಜಂಕ್ಷನ್ ಕಡೆಗೆ ಸಾಗುವ ವಾಹನಗಳ ಸಂಚಾರದಲ್ಲಿ ಬದಲಾವಣೆ ಇಲ್ಲ.