ಕಟಾರಿಯಾದ ಕಠಾರಿಯಾ ಸಮಿತಿ ವರದಿ
ಮನೋಜ್‍ಕುಮಾರ್ ಕಠಾರಿಯಾ ಆಯೋಗದ ವರದಿಗೆ ಉತ್ತರ ನೀಡದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ದಾಖಲಿಸಿರುವ ಅರ್ಜಿಯನ್ನು...
ಬೆಂಗಳೂರು: ಮನೋಜ್‍ಕುಮಾರ್ ಕಠಾರಿಯಾ ಆಯೋಗದ ವರದಿಗೆ ಉತ್ತರ ನೀಡದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ದಾಖಲಿಸಿರುವ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ದಾಖಲಿಸುವಂತೆ ನ್ಯಾಯಪೀಠ ಅರ್ಜಿದಾರರಿಗೆ ಸೂಚಿಸಿದೆ.
ಪಾಲಿಕೆಯಲ್ಲಿನ ಮಾಜಿ ಸದಸ್ಯರಿಗೆ ಸರ್ಕಾರ ನೀಡಿರುವ ಶೋಕಾಸ್ ನೋಟಿಸ್‍ಗೆ ಉತ್ತರಿಸದ ಸದಸ್ಯರನ್ನು ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಂತೆ ನಿರ್ದೇಶಿಸಬೇಕು
ಎಂದು ಕೋರಿ ಹೈಕೋರ್ಟ್‍ನಲ್ಲಿ ಆನಂದ್ ಕುಮಾರ್ ಎಂಬುವರು ರಿಟ್ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಆರ್.ಎಸ್. ಚೌಹಾಣ್ ಅವರಿದ್ದ ಏಕಸದಸ್ಯ ಪೀಠ, ಸದ್ಯ ದಾಖಲೆಯಾಗಿರುವ ಅರ್ಜಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಸಲ್ಲಿಕೆಯಾಗಲು ಅರ್ಹತೆ ಹೊಂದಿದೆ. ಆದ್ದರಿಂದ ಇದನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿಯೇ ಹೋಗಿ
ಪ್ರಶ್ನಿಸಿ ಎಂದು ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಜೇಶ್ ವಾದ ಮಂಡಿಸಿ, ಪಾಲಿಕೆಯಲ್ಲಿ ವಿವಿಧ ಕಾಮಗಾರಿಗೆ ಮೀಸಲಿಟ್ಟ ಹಣ ದುರುಪಯೋಗ ಆಗಿರುವುದಾಗಿ ಕಠಾರಿಯಾ ಆಯೋಗ ವರದಿ
ನೀಡಿದೆ. ಅದರಂತೆ ರಾಜ್ಯ ಸರ್ಕಾರ ಚುನಾಯಿತ 198 ಪಾಲಿಕೆ ಸದಸ್ಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ, ಈ ವರೆಗೂ ಯಾವೊಬ್ಬ ಸದಸ್ಯರು ನೋಟಿಸ್‍ಗೆ ಉತ್ತರಿಸಿಲ್ಲ. ಆದ್ದರಿಂದ ನೋಟಿಸ್‍ಗೆ ಉತ್ತರಿಸದ ಸದಸ್ಯರಿಗೆ ಮುಂಬುವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಹಾಗೆಯೇ ನೋಟಿಸ್‍ಗೆ ಮಾಜಿ ಸದಸ್ಯರಿಂದ ಪಡೆಯುವ ಉತ್ತರದ ಮಾಹಿತಿಯನ್ನು ರಾಜ್ಯ ಚುನಾವಣಾ ಆಯೋಗ ವೆಬ್ ಸೈಟ್‍ನಲ್ಲಿ ಅಡಕ ಮಾಡಬೇಕು. ಈ ಮೂಲಕ ಜನರು ಆಯ್ಕೆ ಮಾಡಿದ ತಮ್ಮ ಜನಪ್ರತಿನಿಧಿಗಳು ಎಷ್ಟು ಶುದ್ಧ ಹಸ್ತರು ಎಂದು ಜನರಿಗೆ ತಿಳಿಯಬೇಕು.
ಈ ನಿಟ್ಟಿನಲ್ಲಿ ಪಾಲಿಕೆ, ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಅಲ್ಲದೇ ವಿಸರ್ಜಿತ ಬಿಬಿಎಂಪಿ ತನ್ನ ಆಡಳಿತಾವಧಿಯಲ್ಲಿ ಕಾಮಗಾರಿಗೆಂದು ರು.8 ಸಾವಿರ ಕೋಟಿ ಸಾಲದ ರೂಪದಲ್ಲಿ ಪಡೆದಿದೆ. ಆ ಹಣವನ್ನು ಪಾಲಿಕೆ ಸದಸ್ಯರು ದುರುಪಯೋಗಪಡಿಸಿಕೊಂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ಪಾಲಿಕೆ ಸದಸ್ಯರಿಂದ ವಸೂಲು ಮಾಡಬೇಕು. ಮಾತ್ರವಲ್ಲದೇ ಸೆಕ್ಷನ್ 7(13)(ಎಚ್)ಪ್ರಕಾರ ವಾರ್ಡ್ ಸಮಿತಿಯಲ್ಲಿ ಪಾಲಿಕೆ ಸದಸ್ಯರಿಗೆ ನೀಡಿರುವ `ವಿಟೊ' ಅಧಿಕಾರವನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.