ಬೆಂಗಳೂರು: ಚುನಾವಣಾ ನೀತಿ ಸಂಹಿತೆ ರದ್ದಾಗಿರುವುದರಿಂದ ಬಿಬಿಎಂಪಿಯ ಸುಮಾರು 1 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದರಿಂದ, ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ, ಕಸ ವಿಲೇವಾರಿ ಕಾರ್ಯಗಳುಗೆ ಟೆಂಡರ್ ಕರೆಯಲು ಅಡ್ಡಿಯುಂಟಾಗಿತ್ತು. ಮಳೆಗಾಲ ಆರಂಭವಾಗಿದ್ದರಿಂದ ಗುಂಡಿ ಮುಚ್ಚುವುದು, ಮರು ಡಾಂಬರೀಕರಣ ಸೇರಿದಂತೆ ರಸ್ತೆ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಸಾಧ್ಯವಾಗಿರಲಿಲ್ಲ. ಚುನಾವಣೆಗೆ ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆದಿರುವುದರಿಂದ ನೀತಿ ಸಂಹಿತೆ ರದ್ದಾಗಿದೆ. ಹೀಗಾಗಿ ಬಾಕಿ ಉಳಿದಿದ್ದ ಸುಮಾರು 1 ಸಾವಿರ ಕೋಟಿ ಮೊತ್ತದ ರಸ್ತೆ ಕಾಮಗಾರಿಗಳಿಗೆ ಮತ್ತೆ ಜೀವ ಬಂದಂತಾಗಿದೆ.
ನಗರೋತ್ಥಾನ ಯೋಜನೆಯಡಿ ದೊರೆತ ಹಣದಲ್ಲಿ ರೂ 484 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಉದ್ದೇಶಿಸಲಾಗಿತ್ತು. ಟೆಂಡರ್ ಪ್ರಕ್ರಿಯೆಗಳು ಮುಗಿದ ಬಳಿಕ ಇದರಲ್ಲಿ ರೂ 150 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಮಾತ್ರ ಕಾರ್ಯಾದೇಶ ನೀಡಲಾಗಿತ್ತು. ಉಳಿದ ರೂ.334 ಕೋಟಿ ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವುದು ಬಾಕಿ ಇರುವಾಗ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಲೋಕೋಪಯೋಗಿ ಇಲಾಖೆಯಿಂದಲೂ ರಸ್ತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. 169 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ರೂ 347 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ರೂ 653 ಕೋಟಿ ಕಾಮಗಾರಿಗೆ ಟೆಂಡರ್ ಕರೆಯಬೇಕಿದೆ. ಈಗ ಕಾಮಗಾರಿ ಪ್ರಕ್ರಿಯೆಗಳು ಪ್ರಾರಂಭವಾಗಲಿದ್ದು ಇದೇ ವೇಳೆ ಬಿಬಿಎಂಪಿ ನಿರ್ಮಿಸುತ್ತಿರುವ ಕಸ ಸಂಸ್ಕರಣಾ ಘಟಕಗಳಿಗೂ ಚಾಲನೆ ದೊರೆಯುವ ಸಾಧ್ಯತೆ ಇದೆ.