ಬೆಂಗಳೂರು: ಮದ್ಯ ಸೇವಿಸಿದ್ದಲ್ಲದೆ, ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಚೀತಾ ಬೈಕ್ ಗೆ ಕಾರು ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಸಾಫ್ಟ್ ವೇರ್ ಎಂಜಿನಿಯರ್ ವೀರಭದ್ರ ಎಂಬಾತನನ್ನು ಕೆಂಗೇರಿ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಕೆಂಗೇರಿ ಠಾಣೆಯ ಕಾನ್ ಸ್ಟೇಬಲ್ ಗಳಾದ ಅನಿಲ್ ಕುಮಾರ್ ಮತ್ತು ಅಂದಾನಿ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ ರೆ.
ನಾಗದೇವನಹಳ್ಳಿ ನಿವಾಸಿಯಾದ, ಆರೋಪಿ ವೀರಭದ್ರ ಶನಿವಾರ ರಾತ್ರಿ ಕೊಮ್ಮಘಟ್ಟ ಮುಖ್ಯರಸ್ತೆಯ ಸ್ಯಾಟಲೈಟ್ ಕ್ಲಬ್ ಗೆ ತೆರಳಿದ್ದ. ಮದ್ಯಪಾನ ಮಾಡಿ ರಾತ್ರಿ 12.15ರ ಸುಮಾರಿನಲ್ಲಿ ನಶೆಯಲ್ಲೇ ಕಾರು ಚಲಾಯಿಸಿಕೊಂಡು ಮನೆಗೆ ಹೊರಟಿದ್ದ. ಕೆಂಗೇರಿ-ಕೊಮ್ಮಘಟ್ಟ ಮುಖ್ಯರಸ್ತೆಯಲ್ಲಿ ಚೀತಾ ಬೈಕ್ ನಲ್ಲಿ ಗಸ್ತಿನಲ್ಲಿದ್ದ ಅನಿಲ್ ಮತ್ತು ಅಂದಾನಿ, ಕೊಮ್ಮಘಟ್ಟ ಕಡೆಗೆ ಹೋಗುತ್ತಿದ್ದರು. ಆಗ ಹಿಂದಿನಿಂದ ವೇಗವಾಗಿ ಬಂದ ವೀರಭದ್ರ, ಚೀತಾ ಬೈಕ್ ಗೆ ಕಾರು ಗುದ್ದಿಸಿದ. ಗಾಯಗೊಂಡ ಸಿಬ್ಬಂದಿ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಆಗ ಸ್ಥಳಕ್ಕಾಗಮಿಸಿದ ಹೊಯ್ಸಳ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು.
ಆರೋಪಿ ಮೇಲೆ ಐಪಿಸಿ ಕಲಂ 279 ಹಾಗೂ 337 ಅನ್ವಯ ಪ್ರಕರಣ ದಾಖಲಿಸಲಾಗಿದೆ.