ಬೆಂಗಳೂರು: ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಅವರ ವಿರುದ್ಧ 11 ಕೋಟಿ ರೂಪಾಯಿ ವಂಚನೆ ಮತ್ತು ಚೆಕ್ ಬೌನ್ಸ್ ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ನಾಗರಬಾವಿ ನಿವಾಸಿ ಅಂಜನಾ ಎ.ಶಾಂತವೀರ ಅವರು ದೂರು ದಾಖಲಿಸಿದ್ದು, ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಜುಲೈ 14ಕ್ಕೆ ವಿಚಾರಣೆ ಮುಂದೂಡಿದೆ.
ದೂರಿನಲ್ಲಿ ಏನಿದೆ?:
ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ತಮಗೆ ಹಲವು ವರ್ಷಗಳಿಂದ ಪರಿಚಯವಿದೆ. ಎರಡೂ ಕುಟುಂಬಗಳ ನಡುವೆ ಸಾಕಷ್ಟು ಬಾರಿ ಕೋಟಿಗಟ್ಟಲೆ ಹಣಕಾಸು ವ್ಯವಹಾರವೂ ನಡೆದಿದೆ. ತಾವು ಸಹ ಹಲವು ಬಾರಿ ಕೋಟಿಗಟ್ಟಲೆ ಸಾಲ ನೀಡಿದ್ದೇವೆ. 2011ರ ಜನವರಿ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ 12 ಸಲ ಕೋಟಿ ಮತ್ತು ಲಕ್ಷದಲ್ಲಿ ಹಣ ನೀಡಲಾಗಿದೆ. ಈಗ ಸದ್ಯ ಸಾಲದ ಮೊತ್ತ 11.88 ಕೋಟಿ ರೂಪಾಯಿ ಆಗಿದೆ.
ತಮ್ಮ ಮೂರು ಕಾರ್ಖಾನೆಗಳ ನವೀಕರಣ ಮಾಡಬೇಕಿದೆ. ಅದಕ್ಕಾಗಿ ಹಣ ನೀಡಿ ಎಂದು ಸಚಿವರು ಕೇಳಿಕೊಂಡಿದ್ದೇವೆ. ಆದರೆ, ಸಚಿವರು ಇದುವರೆಗೂ ಮರು ಪಾವತಿಸಿಲ್ಲ. ಮರುಪಾವತಿಗೆ ನೀಡಿದ್ದ ಚೆಕ್ ಸಹ ಬೌನ್ಸ್ ಆಗಿದೆ. ನನ್ನ ಬಳಿ ಹಣವಿಲ್ಲದಿದ್ದರೂ ಬೇರೆಯವರಿಂದ ಸಾಲ ಕೊಡಿಸಿದ್ದೇನೆ. ವಾರ್ಷಿಕ ಶೇಕಡಾ 12ರಷ್ಟು ಬಡ್ಡಿಯಂತೆ ಸಾಲ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದರೆ ಸಚಿವರ ವಿಶೇಷಾಧಿಕಾರಿ ಚೆಕ್ ವಾಪಸ್ ನೀಡುವಂತೆ ಕೋರಿದ್ದಾರೆ. ಅಲ್ಲದೆ, ತಮ್ಮನ್ನು ಜವಳಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸತಾಯಿಸುತ್ತಿರುವ ಸಚಿವರು:
ತಮಗೆ ಬೇಕಾದ ಸಮಯಕ್ಕೆ ಸಚಿವರು ಹಣ ಪಡೆದಿದ್ದು ವಾಪಸ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. 2012ರಿಂದಲೂ ತಾವು ಹಣದ ಬೇಡಿಕೆ ಇಟ್ಟಿದ್ದೇವೆ. ಆದರೆ, ಅವರು ಹಣ ನೀಡದೇ ಸತಾಯಿಸುತ್ತಿದ್ದಾರೆ. ಅಲ್ಲದೆ ತಮ್ಮ ಹಾಗೂ ಅವರ ನಡುವಿನ ಹಣಕಾಸು ವ್ಯವಹಾರ ಸಂಬಂಧ ಕುರಿತು ಸ್ಟ್ಯಾಂಪ್ ಪೇಪರ್ ನಲ್ಲಿಯೂ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಆ ಕುರಿತು ಸ್ಟ್ಯಾಂಪ್ ಪೇಪರ್ ಹಾಗೂ ಹಣವನ್ನು ಅಂಜನಾ ಎ. ಶಾಂತವೀರ ಎನ್ನುವ ಹೆಸರಿಗೆ ಸಚಿವರು ನೀಡಿದ್ದಾರೆ ಎಂದಿರುವ ಅವರು, ಸಚಿವರ ಸಹಿ ಇರುವ ಚೆಕ್ ಅನ್ನು ನ್ಯಾಯಾಲಯಕ್ಕೆ ನೀಡಿ, ತಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಬಾಬುರಾವ್ ಚಿಂಚನಸೂರ, ನಾನು ಆಕೆಗೆ ಕರೆ ಮಾಡಿಲ್ಲ, ಚೆಕ್ ಸಹ ನೀಡಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಅಲ್ಲಿಯೇ ತೀರ್ಮಾನ ಆಗಲಿ. ಆದರೆ ,ನನ್ನ ವಿಶೇಷಾಧಿಕಾರಿ ಆಕೆಗೆ ಕರೆ ಮಾಡಿ ಈ ರೀತಿಯ ವಿಶೇಷ ಆಹ್ವಾನ ನೀಡಿರುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.ಅಲ್ಲದೆ, ಮಹಿಳೆ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಚೆಕ್ ಲೀಫ್ ನ್ನು ಕದ್ದು ತಮ್ಮ ಬ್ಯಾಂಕಿನಿಂದ 11 ಕೋಟಿ ರೂಪಾಯಿಯನ್ನು ಲಪಟಾಯಿಸಲು ಯತ್ನಿಸಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.ಸಚಿವರ ದೂರಿನ ಮೇರೆಗೆ ವಿಧಾನಸೌಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.