ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಸದ್ಯ ಕ್ಯಾನ್ಸರ್ ರೋಗದಿಂದ ಬಳಲುತ್ತಿದೆ. ದೂರು ದಾಖಲಾದರೆ ತನಿಖೆ ಪೂರ್ಣಗೊಳಿಸಲು ವಿಳಂಬ ಮಾಡುವ ಮೂಲಕ ಸಂಸ್ಥೆಯಲ್ಲಿನ ಹುಳುಕನ್ನು ಸಾರಿ ಹೇಳುತ್ತಿದೆ. ಇದರಿಂದ ಸಂಸ್ಥೆಯ ಮೇಲಿದ್ದ ಗೌರವ ಕಡಿಮೆ ಆಗುತ್ತಿದೆ ಎಂದು ಲೋಕಾಯುಕ್ತ ಸಂಸ್ಥೆಗೆ ಹೈಕೋರ್ಟ್ ಚಾಟಿ ಬೀಸಿದೆ.
ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ 18 ತಿಂಗಳಾದರೂ ತನಿಖೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ವಿ.ಎಲ್. ನಂದೀಶ್ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ ಲೋಕಾಯುಕ್ತ ಕಾರ್ಯವೈಖರಿಗೆ ಬಹಳ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಾಯುಕ್ತದಲ್ಲಿನ ಹುಳುಕಿನ ಬಗ್ಗೆ ಈಗ ಬಾಯಿ ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ.ನಾನು ಬಾಯಿ ಬಿಟ್ಟು ಹೇಳುವಂತೆ ಮಾಡಬೇಡಿ ಎಂದು ಪೀಠ ಲೋಕಾಯುಕ್ತಕ್ಕೆ ಎಚ್ಚರಿಕೆ ನೀಡಿದೆ.