ಬೆಂಗಳೂರು:ಗ್ರಾಫಿಕ್ ಇಂಡಿಯಾ ಟ್ರಾಫಿಕ್ ಸಿಗ್ನಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಿಷೇಧಿತ ರಸ್ತೆಯಲ್ಲಿ ವಾಹನ ಸಂಚಾರ ನಿಯಂತ್ರಿಸಲು ಕಾನ್ಸ್ಟೇಬಲ್ ಸತ್ಯನಾರಾಯಣ ಬರಿಗೈನಲ್ಲಿ ಸಿಮೆಂಟ್ ಕಾಂಕ್ರಿಟ್ ಎತ್ತಿಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾರೆ.
ವೈಟ್ ಫೀಲ್ಡ್ ಸಂಚಾರ ಠಾಣೆಯ ಕಾನ್ಸ್ಟೇಬಲ್ ಸತ್ಯನಾರಾಯಣ ಅವರ ಕರ್ತವ್ಯಪ್ರಜ್ಞೆಗೆ ಮೆಚ್ಚಿ ನಗರ ಸಂಚಾರ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ.ಸಲೀಂ 2 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಸೀತರಾಮನಪಾಳ್ಯ ಕಡೆಯಿಂದ ಗ್ರಾಫಿಕ್ ಜಂಕ್ಷನ್ ಕಡೆಗೆ ವಾಹನಗಳು ನುಗ್ಗಿ ಬರುವುದನ್ನು ತಡೆಗಟ್ಟಲು ರಸ್ತೆ ವಿಭಜಕ ಇತ್ತು. ಆದರೆ, ದ್ವಿಚಕ್ರ ವಾಹನ ಸವಾರರು ವಿಭಜಕದ ಒಂದು ಸಿಮೆಂಟ್ ಕಲ್ಲನ್ನು ಕಿತ್ತು ಹಾಕಿದ್ದರು. ಈ ಮೂಲಕ ಮುಖ್ಯರಸ್ತೆಗೆ ನುಗ್ಗಿ ಬರುತ್ತಿತ್ತು. ಇದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಅಡ್ಡಾದಿಡ್ಡಿ ಚಲಿಸುವ ದ್ವಿಚಕ್ರ ವಾಹನ ಸವಾರರ ಹಾವಳಿ ನಿಯಂತ್ರಣಕ್ಕೆ ಸತ್ಯನಾರಾಯಣ 2 ಸಿಮೆಂಟ್ ಇಟ್ಟಿಗೆ, ಕಾಂಕ್ರೀಟ್ ಬಳಸಿ ವಿಭಜಕವನ್ನು ಮುಚ್ಚಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಫೋಟೋ ಕ್ಲಿಕ್ಕಿಸಿ ಅದನ್ನು ಫೇಸ್ ಬುಕ್ ಗೆ ಹಾಕಿದ್ದರು. ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದ ಕಾಂಕ್ರಿಟ್ ತೆರವುಗೊಳಿಸುತ್ತಿರುವ ನಿಸ್ವಾರ್ಥ ಪೊಲೀಸ್ ಕಾನ್ಸ್ಟೇಬಲ್ ನ್ನು ಪ್ರಸಿದ್ಧರನ್ನಾಗಿ ಮಾಡಿ ಎನ್ನುವ ಪೋಸ್ಟ್ ಮಾಡಲಾಗಿತ್ತು. ಟ್ವಿಟ್ಟರ್ ಹಾಗೂ ಫೇಸ್ ಬುಕ್ ಗಳಲ್ಲಿ ಸತ್ಯನಾರಾಯಣ ಅವರ ಫೋಟೋ ಭಾರೀ ಪ್ರಶಂಸೆ ಪಡೆದಿತ್ತು. ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್ ಬುಕ್ ಪೇಜ್ ನಲ್ಲಿ 9 ಸಾವಿರ ಲೈಕ್ ಆಗಿದ್ದು, 587 ಸಲ ಶೇರ್ ಆಗಿದೆ.
5 ವರ್ಷಗಳಿಂದ ವೈಟ್ ಫೀಲ್ಡ್ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸತ್ಯನಾರಾಯಣ ಅವರು ಈ ಹಿಂದೆಯೂ ಸಾಕಷ್ಟು ಬಾರಿ ಸಣ್ಣಪುಟ್ಟ ರಸ್ತೆ ಗುಂಡಿಗಳನ್ನು ಮುಚ್ಚಿ ಸ್ಥಳೀಯರು ಹಾಗೂ ವಾಹನ ಸವಾರರ ಪ್ರಶಂಸೆಗೆ ಪಾತ್ರರಾಗಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಲವು ಗಣ್ಯರು ಸತ್ಯನಾರಾಯಣ ಅವರ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಪೈಕಿ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಫೇಸ್ ಬುಕ್ ಪೇಜ್ ನಲ್ಲಿನ ಫೋಟೋಗೆ ಬರೋಬ್ಬರಿ 3,48,886 ಲೈಕ್ ಗಳು ಬಂದಿವೆ. 21,208 ಮಂದಿ ಶೇರ್ ಮಾಡಿದ್ದಾರೆ. ಸುಗಮ ಸಂಚಾರಕ್ಕಾಗಿ ಯಾರಿಗೂ ಕಾಯದೆ ಕಾರ್ಯನಿರ್ವಹಿಸಿದ ಇವರಿಗೆ ರೆಸ್ಪೆಕ್ಟ್ ಎಂದು ರಾಜಮೌಳಿ ಪೋಸ್ಟ್ ಮಾಡಿದ್ದಾರೆ.