ಬೆಂಗಳೂರು: ಹೆಗ್ಗನಹಳ್ಳಿ ಸಮೀಪದ ಸಂಜೀವಿನಿ ನಗರದಲ್ಲಿ ತಡರಾತ್ರಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿಲ್ಲ ಎನ್ನುವ ಆರೋಪವನ್ನು 108 ಅಂಬುಲೆನ್ಸ್ ಅಧಿಕಾರಿ
ನಿರಾಕರಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಸೇವೆ ಲಭ್ಯವಾಗದೇ ಇರಲು ಕಾರಣ ಕೇಳಿದಾಗ, `ಆ ಸಂದರ್ಭದಲ್ಲಿ ವಾಹನ ಬೇರೆ ಕಡೆ ಎಂಗೇಜ್ ಆಗಿದ್ದಿರಬಹುದು. ಅಲ್ಲದೇ ತಕ್ಷಣ ಸ್ಥಳಕ್ಕೆ ಬರಲು ತಡವಾಗುತ್ತದೆ ಎಂದು ಹೇಳಿರಬಹುದು. ಆದರೆ, ಸೇವೆ ಇಲ್ಲ ಎಂದು ನಿಯಂತ್ರಣ ಕೊಠಡಿ ಸಿಬ್ಬಂದಿ ಹೇಳಿರುವುದಿಲ್ಲ. ನಮ್ಮಿಂದ ಯಾವುದೇ ಲೋಪವಾಗಿಲ್ಲ' ಎಂದು 108 ಅಂಬುಲೆನ್ಸ್‍ನ ಗುಣಮಟ್ಟ ವಿಭಾಗದ ಮುಖ್ಯಸ್ಥ ಪರ್ವೀಜ್ ತಿಳಿಸಿದರು.
ನೆರವಿಗೆ ಹಂಬಲಿಸಿದ ರಾತ್ರಿಯ ನೆನಪು: ಪತ್ನಿ ಹೆರಿಗೆಗೆ ದಿನ ತುಂಬಿದ್ದರಿಂದ, ಯಾವುದೇ ಸಂದರ್ಭದಲ್ಲಿ ಹೆರಿಗೆ ನೋವು ಬರಬಹುದು ಎಂದು ಗೊತ್ತಿತ್ತು. ಹೀಗಾಗಿ, ಆಸ್ಪತ್ರೆಗೆ ಕರೆದೊಯ್ಯಬೇಕಾದ ಅಗತ್ಯವಿರುತ್ತದೆ ಎಂದು ಆಟೋ ಚಾಲಕನ ನಂಬರ್ ಕೂಡಾ ಇಟ್ಟುಕೊಂಡಿದ್ದೆ. ಆದರೆ, ಆ ಸಮಯದಲ್ಲಿ ಕರೆ ಮಾಡಿದಾಗ ಅವರು ಬರಲು ಆಗುವುದಿಲ್ಲ ಎಂದು ಹೇಳಿದರು. ಹೀಗಾಗಿ, ರಸ್ತೆಗೆ ಬಂದು ಕೆಲ ಆಟೋಗಳ ನಿಲ್ಲಿಸಿದ್ದ ಮನೆಗಳಿಗೆ ಹೋಗಿ ಬಾಗಿಲು ಬಡಿದೆವು. ಆದರೆ, ಯಾರೊಬ್ಬರು ನೆರವಿಗೆ ಧಾವಿಸದೆ ಇರುವುದು ಬೇಸರವಾಯಿತು ಎಂದು ಘಟನೆಯ ಕೇಂದ್ರ ಬಿಂದು ಅಸಾಜಿ ಅವರ ಪತಿ ಮನೋಹರನ್ ಹೇಳಿದರು.
ತಮಿಳುನಾಡಿನಿಂದ 15 ವರ್ಷಗಳ ಹಿಂದೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದೆ. ಇಂತಹ ಪರಿಸ್ಥಿತಿ ಯಾವತ್ತೂ ಎದುರಿಸಿರಿಲ್ಲ. ಈ ಹಿಂದೆ ಮನೆಗಳಲ್ಲೇ ಮಕ್ಕಳ ಹೆರಿಗೆಯಾಗುತ್ತಿದ್ದವು ಎಂದು ಕೇಳಿದ್ದೇನೆ. ಆದರೆ, ಇತ್ತೀಚೆಗೆ ಎಲ್ಲವೂ ಆಸ್ಪತ್ರೆಯಲ್ಲೇ ನಡೆಯುತ್ತದೆ. ಅಲ್ಲದೇ ಮೊದಲಿನಂತೆ ಪ್ರಸೂತಿ ಬಗ್ಗೆ ಮಾಹಿತಿ ಹೊಂದಿದ ಹಿರಿಯ ಮಹಿಳೆಯರು ನಗರದಲ್ಲಿ ಇರುವುದನ್ನು ನಾನು ಕಂಡಿಲ್ಲ. ಕೆಲ ವರ್ಷಗಳ ಹಿಂದೆ ನಮ್ಮ ಕುಟುಂಬದಲ್ಲೇ ಒಬ್ಬರಿಗೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹೆರಿಗೆಯಾಗಿತ್ತು. ಅಲ್ಲದೇ ಈ ರೀತಿ ರೈಲು, ಬಸ್ ಹಾಗೂ ತೆರೆದ ಪ್ರದೇಶದಲ್ಲೇ ಹೆರಿಗೆ ಆಗಿರುವ ಬಗ್ಗೆ ಕೇಳಿದ್ದೇನೆ. ಆದರೆ, ಅಂತಹ ಸ್ಥಿತಿ ನನ್ನ ಜೀವನದಲ್ಲೇ ಎದುರಿಸಬೇಕಾಗುತ್ತದೆ ಎಂದು ಊಹಿಸಿರಲಿಲ್ಲ. ಅಂತಿಮವಾಗಿ ರಾಜಗೋಪಾಲನಗರ ಹೊಯ್ಸಳ ಪೊಲೀಸರು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕಾರಣ ಯಾವುದೇ ಅಡಚಣೆ ಇಲ್ಲದೆ ಹೆರಿಗೆ ಆಗಿ ತಾಯಿ-ಮಗು ಆರಾಮವಾಗಿದ್ದಾರೆ ಎಂದು ಮನೋಹರನ್ ನಿಟ್ಟುಸಿರು ಬಿಟ್ಟರು.
ಭಾನುವಾರ ತಡರಾತ್ರಿ ಮನೋಹರನ್ ಪತ್ನಿ ಗರ್ಭಿಣಿ ಆಸಾಜಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಕರೆದೊಯ್ಯಲು ಪತಿ ಮನೋಹರನ್ 108
ಸಂಖ್ಯೆಗೆ ಕರೆ ಮಾಡಿದ್ದರು. ಆದರೆ, ಸಮೀಪದ ಹೆಗ್ಗನಹಳ್ಳಿ ಕ್ರಾಸ್ ಸರ್ಕಾರಿ ಆಸ್ಪತ್ರೆ ಬಳಿ ಇರುವ ಅಂಬುಲೆನ್ಸ್ ಸೇವೆ ಲಭ್ಯವಿಲ್ಲ. ಬೇರೆ ಕಡೆಯಿಂದ ಬರಲು ತಡವಾಗುತ್ತದೆ ಎಂದು ನಿಯಂತ್ರಣ ಕೊಠಡಿಯಿಂದ ಉತ್ತರ ಬಂದಿತ್ತು.
ನೋವು ತೀವ್ರವಾಗಿದ್ದ ಕಾರಣ ನೆರವಿಗೆ ಧಾವಿಸಿದ ರಾಜಗೋಪಾಲನಗರ ಪೊಲೀಸರು ಹೊಯ್ಸಳ ಜೀಪ್‍ನಲ್ಲೇ ಗೊರಗುಂಟೆಪಾಳ್ಯದ ಇಎಸ್‍ಐ ಆಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆಗೆ ತಲುಪಿದ ಹತ್ತೆ ನಿಮಿಷದಲ್ಲೇ ಹೆಣ್ಣು ಮಗುವಿಗೆ ಆಸಾಜಿ ಜನ್ಮ ನೀಡಿದ್ದಳು. ಪೊಲೀಸರ ಈ ಮಾನವೀಯ ಕ್ರಮ ಮೆಚ್ಚುಗೆಗೆ ಪಾತ್ರವಾದ ಹಾಗೆ, ನೆರವಿಗೆ ಬಾರದ ಆಂಬುಲೆನ್ಸ್ ಕ್ರಮ ಕುರಿತು ತೀವ್ರ ಖಂಡನೆಯೂ ವ್ಯಕ್ತವಾಗಿತ್ತು.