ಬೆಂಗಳೂರು: ಅಕ್ರಮ ಅದಿರು ರಫ್ತು ಆರೋಪದಡಿ ಬಂಧಿತರಾಗಿರುವ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಅವರನ್ನು ಜುಲೈ 20ರವರೆಗೆ ಸಿಬಿಐ ಕಸ್ಟಡಿಗೆ ನೀಡಲು ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಇನ್ನೊಂದೆಡೆ ಲಾಡ್ ಅವರ ಜಾಮೀನು ವಿಚಾರಣೆ ಅರ್ಜಿಯನ್ನೂ ಮುಂದೂಡಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಅನಿಲ್ ಲಾಡ್ ಅವರನ್ನು ಬಂಧಿಸಿದ್ದ ಸಿಬಿಐ ಅಧಿಕಾರಿಗಳು, ಗುರುವಾರ ಬೆಳಗ್ಗೆ ಸುಮಾರು 11ರ ವೇಳೆಗೆ ಬಿಗಿ ಭದ್ರತೆ ನಡುವೆ ಸಿಟಿ ಸಿವಿಲ್ ನ್ಯಾಯಾಲಯದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನಂತರ ಅನಿಲ್ ಲಾಡ್ ಪರ ವಕೀಲರಾದ ಸಿ.ವಿ.ನಾಗೇಶ್, ಶಾಸಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿ ಜಾಮೀನು ಅರ್ಜಿ ಸಲ್ಲಿಸಿದರು.
ಸಿಬಿಐ ಆಕ್ಷೇಪ: ಸಿ.ವಿ.ನಾಗೇಶ್ ಅವರು ಅರ್ಜಿ ಸಲ್ಲಿಸಲು ಮುಂದಾದ ತಕ್ಷಣ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಅಧಿಕಾರಿಗಳು, ಅಕ್ರಮ ಅದಿರು ರಫ್ತು ಸಂಬಂಧ ಲಾಡ್ ಅವರ ವಿಚಾರಣೆ ಸಾಕಷ್ಟು ಬಾಕಿ ಇದೆ. ಯಾವುದೇ ಕಾರಣಕ್ಕೂ ಅವರಿಗೆ ಜಾಮೀನು ನೀಡಬಾರದು. ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ನಂತರ ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶ ಎಚ್.ಕೆ. ಮಲ್ಲಪ್ಪ ಅವರು, ಸಿಬಿಐ ಅಧಿಕಾರಿಗಳ ಮನವಿಯನ್ನು ಸ್ವೀಕರಿಸಿದರು. ಲಾಡ್ ಅವರನ್ನು ಜುಲೈ 20ರವರೆಗೆ ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿ ಸೂಚನೆ ನೀಡಿದರು. ಅದೇ ದಿನ ಜಾಮೀನು ಅರ್ಜಿ ಸಲ್ಲಿಸುವಂತೆ ಆದೇಶಿಸಿದರು. ಬುಧವಾರ ಲಾಡ್ ಅವರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ರಾತ್ರಿ ಎಲ್ಲಿ ಇರಿಸಿದ್ದರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, 2010ರಲ್ಲಿ ನಡೆದಿದೆಯೆನ್ನಲಾದ 15 ಸಾವಿರ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಅಕ್ರಮ ಸಾಗಣೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಶಾಸಕರಭೇಟಿ, ಕುತೂಹಲ: ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಸಂಬಂಧ ಈ ಹಿಂದೆ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಗುರುವಾರ ಬೆಳಗ್ಗೆ ಸಿಬಿಐ ಕಚೇರಿಗೆ ಆಗಮಿಸಿ, ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ನಂತರ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅನಿಲ್ ಲಾಡ್ ತಮ್ಮ ಸ್ನೇಹಿತರಾಗಿದ್ದು, ಇದು ಸೌಹಾರ್ದ ಭೇಟಿ ಎಂದು ತಿಳಿಸಿದ್ದಾರೆ.