ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಯಹತ್ಯೆ ಬಗ್ಗೆ ಕಾಳಜಿ ತೋರಿರುವ ರಾಜ್ಯಪಾಲ ವಿ.ಆರ್. ವಾಲಾ, ಸರ್ಕಾರ ಕೈಗೊಂಡಿರುವ ಕ್ರಮಗಳು, ಮುನ್ನೆಚ್ಚರಿಕೆ ಬಗ್ಗೆ ಸಮಗ್ರ ಮಾಹಿತಿಯನ್ನುವಾರದೊಳಗೆ ಒದಗಿಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರೈತರ ಸರಣಿ ಆತ್ಮಹತ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ದೇಶಾದ್ಯಂತ ವಿಷಯವಾಗಿದೆ. ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಯಾವ ಕಾರಣಕ್ಕೆ ಸಾವುಗಳು ಸಂಭವಿಸಿವೆ. ಸರ್ಕಾರ ಕೈಗೊಂಡಿರುವ ಈವರೆಗಿನ ಕ್ರಮ ಹಾಗೂ ನೀಡಿರುವ ಪರಿಹಾರದ ಬಗ್ಗೆ ಅಂಕಿ-ಅಂಶಗಳ ಸಹಿತ ಸಮಗ್ರ ಮಾಹಿತಿ ನೀಡಬೇಕು. ಅಲ್ಲದೆ, ರೈತರ ಆತ್ಮಹತ್ಯೆ ತಡೆಗಟ್ಟಲು ಸರ್ಕಾರ ಯಾವ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಸರ್ಕಾರ ವಿವರವಾಗಿ ನೀಡಬೇಕು ಎಂದು ರಾಜ್ಯಪಾಲರು ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿನ ಲೋಕಾಯುಕ್ತ ಪ್ರಕರಣದಲ್ಲಿ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಸರ್ಕಾರದ ವಿಳಂಬ ನೀತಿಗೆ ಏನು ಕಾರಣ? ಅದಲ್ಲದೆ, ಲೋಕಾಯುಕ್ತ ಭ್ರಷ್ಟಾಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆಯೂ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದು ವಿವರಣೆಯನ್ನು ಕೋರಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದವು. ಆದರೆ, ರಾಜ್ಯಪಾಲರ ಪತ್ರದ ಬಗ್ಗೆ ಸಿಎಂ ಕಚೇರಿಯ ಮೂಲಗಳು ಸ್ಪಷ್ಟನೆ ನೀಡಿದ್ದು, ರೈತರ ಆತ್ಮಹತ್ಯೆ ಕುರಿತಾದ ಮಾಹಿತಿಯನ್ನಷ್ಟೇ ರಾಜ್ಯಪಾಲರು ಕೇಳಿದ್ದಾರೆ ಎಂದು ತಿಳಿಸಿವೆ.