ಬೆಂಗಳೂರು: ರಾಜ್ಯದಲ್ಲಿ ಅನ್ನದಾತನ ಸಾವು ಮುಂದುವರಿದಿದೆ. ಒಬ್ಬ ರೈತ ಮಹಿಳೆ ಸೇರಿದಂತೆ ಒಟ್ಟು ಆರು ಮಂದಿ ರೈತರು ಗುರುವಾರ ಆತ್ಮಹತ್ಯೆ ಹಾದಿಹಿಡಿದಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ತಿಮಕಾಪುರದ ಟಿ. ಕೆ. ಶಿವಣ್ಣ (48) ಎಂಬುವರು ತಂಬಾಕು ಬೆಳೆಗಾರರಾಗಿದ್ದು, ರು.8 ಲಕ್ಷ ಸಾಲ ಮಾಡಿದ್ದರು. ಸಾಲದಿಂದ ಒತ್ತಡಕ್ಕೆ ಸಿಲುಕಿ ವಿಷ ಸೇವಿಸಿದ್ದಾರೆ. ಸವಣೂರು ತಾಲೂಕಿನ ಮಾರುತಿಪುರದ ಹನುಮಂತ ಸಿದ್ದಪ್ಪ ಬಂಡಿವಡ್ಡರ (40) ನೇಣುಬಿಗಿದುಕೊಂಡಿದ್ದಾರೆ. ಅವರು ಗೊಬ್ಬರ, ಬಿತ್ತನೆ ಬೀಜಕ್ಕೆಂದು ರು.1.5 ಲಕ್ಷ ಸಾಲ ಮಾಡಿದ್ದರು. ಮಳೆ ಬಾರದೆ ಬೆಳೆ ಹಾನಿಯಾಗಿತ್ತು. ಅಣ್ಣಿಗೇರಿಯ ಭದ್ರಾಪುರ ಗ್ರಾಮದ ರೈತ ದಾವಲಸಾಬ್ ಮಹ್ಮದ್‍ಸಾಬ್ ನಲವಡಿ (53) ನೇಣಿಗೆ ಶರಣಾಗಿದ್ದು, ಹೊಲದಲ್ಲಿ ಬಿತ್ತಿದ ಮೆಣಸಿನ ಬೀಜ ಮಳೆಯಾಗದೆ ಹಾನಿಗಿದ್ದೇ ಈ ನಿರ್ಧಾರಕ್ಕೆ ಕಾರಣವಾಗಿದೆ.
ರು.2.50 ಲಕ್ಷ ಸಾಲ ಮಾಡಿದ್ದರು. ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಮೀರವ್ವ ಧನಸಿಂಗ್ ಲಮಾಣಿ (55) ಎಂಬ ರೈತ ಮಹಿಳೆಯೊಬ್ಬರು ನೇಣಿಗೆ ಕೊರಳೊಡ್ಡಿದ್ದಾರೆ. ಎರಡು ಎಕರೆ ಜಮೀನಿನ ಆಧಾರದ ಮೇಲೆ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಸಾಲ ತೀರಿಸಲಾಗದೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಶಿರಸಿ ತಾಲೂಕಿನ ಕೊಪ್ಪದ ರೈತ ದ್ಯಾವಾ ಈರಾ ನಾಯ್ಕ (65) ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬ್ಯಾಂಕ್‍ನಿಂದ ರು.1 ಲಕ್ಷ ಸಾಲ ಪಡೆದಿದ್ದರು. ಚೆನ್ನಪಟ್ಟಣ ತಾಲೂಕಿನ ಅಬ್ಬೂರುದೊಡ್ಡಿಯ ಸಿದ್ದರಾಮು (55) ನೇಣು ಬಿಗಿದುಕೊಂಡಿದ್ದಾರೆ. 3 ಎಕರೆ ಜಮೀನು ಹೊಂದಿರುವ ಸಿದ್ದರಾಮು ಬ್ಯಾಂಕ್ ಮತ್ತು ಖಾಸಗಿಯಾಗಿ ರು.4 ಲಕ್ಷ ಸಾಲ ಮಾಡಿದ್ದರು.