ಬೆಂಗಳೂರು: ಲೋಕಾ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ದೃಶ್ಯ ಮಾಧ್ಯಮಗಳ ನೆರವು ಕೋರಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಷ್ಟು ದಿನಗಳಲ್ಲಿ ನಡೆದಿರುವ ಎಲ್ಲ ಪ್ರಹಸನ, ಈ ಕುರಿತು ತಮ್ಮ ಮಾಧ್ಯಮಗಳಲ್ಲಿ ಬಿತ್ತರಿಸುವ ವಿಡಿಯೋ ತುಣುಕುಗಳನ್ನು ನೀಡುವಂತೆ ದೃಶ್ಯ ಮಾಧ್ಯಮ ಗಳಿಗೆ ವಿನಂತಿಸಿ ಪತ್ರ ಬರೆದಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಂಸ್ಥೆಯಲ್ಲಿ ಮಾಹಿತಿ ಕಲೆ ಹಾಕಿದ ನಂತರ ಎಸ್‍ಐಟಿ ತಂಡ ಈಗ ಮಾಧ್ಯಮಗಳಲ್ಲಿ ಬಿತ್ತರ ಗೊಂಡಿರುವ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಆರಂಭದ ದಿನದಿಂದ ಇದುವರೆಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಎಲ್ಲ ವಿಡಿಯೋ ದೃಶ್ಯಗಳನ್ನು ನೀಡುವಂತೆ, ಆ ವರದಿಯಲ್ಲಿ ರುವ ಸತ್ಯಾಸತ್ಯತೆ ಅರಿತು ತನಿಖೆ ಚುರುಕುಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಈ ನಡುವೆ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರಿಂದಲೂ ಎಸ್‍ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಬಿಡಿಎ, ಬಿಬಿಎಂಪಿ, ಲೋಕೋಪಯೋಗಿ ಇಲಾಖೆ, ಬಿಡಬ್ಲ್ಯೂಎಸ್ ಎಸ್‍ಬಿ ಸೇರಿದಂತೆ ಹಲವು ಅಧಿಕಾರಿಗಳ ಹೆಸರುಗಳನ್ನು ನಾರಂಗ್ ಅವರು ತಿಳಿಸಿದ್ದು, ಅದನ್ನು ಪರಿಶೀಲಿಸಿ ಶೀಘ್ರದಲ್ಲಿ ಅಂತಹ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಲ ಖಾಸಗಿ ವ್ಯಕ್ತಿಗಳು ಲೋಕಾಯುಕ್ತ ಪುತ್ರ ಅಶ್ವಿನ್ ರಾವ್ ಜತೆ ಸೇರಿ ಅಧಿಕಾರಿಗಳನ್ನು ಹಣಕ್ಕಾಗಿ ಒತ್ತಾಯಿಸುತ್ತಿದ್ದರು ಎಂಬ ಆರೋಪ ವನ್ನು ಎಸ್‍ಐಟಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ ಈ ಸಂಬಂಧ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳನ್ನೂ ವಿಚಾರಣೆಗೆ ಒಳ ಪಡಿಸಲು ತಂಡ ಮುಂದಾಗಿದ್ದು, ಅವರಿಗೆ ನೋಟಿಸ್ ನೀಡಲು ನಿರ್ಧರಿಸಿದೆ ಎಂದು ಮೂಲ ಗಳು ತಿಳಿಸಿವೆ. ಈ ನಡುವೆ ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಬಯಲಿಗೆಳೆದಿರುವ ದೂರುದಾರ ಕೃಷ್ಣಮೂರ್ತಿ ಅವರಿಂದ ಘಟನೆ ಬಗ್ಗೆ ಅಗತ್ಯ ಮಾಹಿತಿ ಪಡೆದಿದ್ದು, ಹಣದ ಬೇಡಿಕೆ ಇಟ್ಟಿರುವ ವ್ಯಕ್ತಿಗಳ ಹೆಸರುಗಳ ವಿವರವನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್ ಸೇರಿದಂತೆ ಲೋಕಾಯುಕ್ತ ಸಂಸ್ಥೆಯ ಸಿಬ್ಬಂದಿ, ಖಾಸಗಿ ವ್ಯಕ್ತಿಗಳ ಹೆಸರು ಸಹ ಕೇಳಿಬಂದಿವೆ ಎನ್ನಲಾಗಿದೆ.