ಬೆಂಗಳೂರು: ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಮುಂದೂಡಲು ಹೊರಟಿದೆ. ಸಂವಿಧಾನಬದ್ಧ ಚುನಾವಣೆ ಮುಂದೂಡ ಹೊರಟಿರುವುದು ನಾಚಿಕೆ ತರೋದಿಲ್ವೇ? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು. ಚುನಾವಣೆ ಆಯೋಗ ಸರ್ಕಾರದ ತಾಳಕ್ಕೆ ಕುಣಿಯುತ್ತಿದೆ. ಸುಪ್ರಿಂ ಕೋರ್ಟ್ ಗೆ ಎಷ್ಟು ಸಲ ಹೋಗ್ತೀರಿ. ಚುನಾವಣೆಗೆ ಹೆದರಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರ್ಡ್ ಮೇಲುಸ್ತುವಾರಿಗೆ ಶಾಸಕರನ್ನು ಹಾಕುತ್ತಾರೆ. ಬಿಬಿಎಂಪಿ ಚುನಾವಣೆ ಮಕ್ಕಳಾಟವಾಗಿದೆ. ಸುಪ್ರಿಂಕೋರ್ಟ್ ನಲ್ಲಿ ಮೂರು ಬಾರಿ ಸರ್ಕಾರಕ್ಕೆ ಮಾನ ಹೋಗಿದ್ದರೂ ಇನ್ನೂ ಬುದ್ಧಿ ಬಂದಿಲ್ಲ ಎಂದು ಕಿಡಿ ಕಾರಿದರು. ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿಯುವ 6 ತಿಂಗಳು ಮೊದಲೇ ಪ್ರಕ್ರಿಯೆ ಆರಂಭಿಸಬೇಕಿತ್ತು. ಚುನಾವಣಾ ಆಯೋಗಕ್ಕೆ ಮಾನ ಮರ್ಯಾದೆ ಹಾಗೂ ಗೌರವವಿದ್ದರೆ ಚುನಾವಣೆ ನಡೆಸಬೇಕು. ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷರು ಈ ಹಿಂದೆ ಒಳ್ಳೆ ಕೆಲಸ ಮಾಡಿದ್ದರು.ಆದರೆ ಅಧ್ಯಕ್ಷರಾದ ಕೂಡಲೇ ಸಂಸ್ಥೆ ಗೌರವಕ್ಕೆ ಕುಂದು ತಂದಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು.
ಪ್ರಕರಣದ ಹಿನ್ನೆಲೆ
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜು.3ರಂದು ಎಂಟು ವಾರದ ಒಳಗಾಗಿ ಚುನಾವಣೆ ನಡೆಸುವಂತೆ ಆದೇಶಿಸಿತ್ತು. ಸುಪ್ರೀಂ ಕೋರ್ಟ್‍ನ ಈ ಆದೇಶ ಹೊರಡಿಸಿದ ನಂತರ ಆಯೋಗ ಈ ಹಿಂದೆ ಪ್ರಕಟಿಸಿದ್ದ ಚುನಾವಣೆ ವೇಳಾಪಟ್ಟಿ ಅಧಿಸೂಚನೆಯನ್ನು ಹಿಂಪಡೆದಿತ್ತು. ಕಾನೂನಿನ ಪ್ರಕಾರ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿ ದಿನಾಂಕವನ್ನು ಘೋಷಣೆ ಮಾಡಿದ ನಂತರ ಅದನ್ನು ಹಿಂಪಡೆದುಕೊಳ್ಳುವಂತಿಲ್ಲ. ಆದರೆ, ರಾಜ್ಯ ಚುನಾವಣಾ ಆಯೋಗ ಪಾಲಿಕೆ ಚುನಾವಣೆ ದಿನಾಂಕ ಪ್ರಕಟಿಸಿ, ನೀತಿ ಸಂಹಿತೆ ಜಾರಿಯಾದ ಬಳಿಕ ಮತ್ತೆ ಆ ಅಧಿಸೂಚನೆ ಹಿಂಪಡೆದಿದೆ. ಈ ಕ್ರಮ ಕಾನೂನಿನ ವಿರುದ್ಧವಾಗಿದ್ದು, ಶೀಘ್ರವೇ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕು ಎಂದು ಸಿ.ಕೆ. ಮುರಳೀಧರ್ ಸೇರಿ ಮತ್ತಿತರರು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.