ಬೆಂಗಳೂರು: ಚಲಾವಣೆ ನಿಲ್ಲಿಸಿರುವ ಅಪ್ಘಾನಿಸ್ತಾನ ನೋಟುಗಳ(ಅಪ್ಘಾನಿ) ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ಮಹಮದ್ ಇಮ್ರಾನ್(21 ) ಮತ್ತು ಚೌಡೇಶ್ವರಿ ನಗರದ ಲಹುಮಾನ್(22 ) ಬಂಧಿತರು. ಆರೋಪಿಗಳಿಂದ ಅಪ್ಘಾನಿಸ್ತಾನದ 10 ಸಾವಿರ ಮುಖಬೆಲೆಯ 41 ನೋಟುಗಳ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತದ ರೂಪಾಯಿಗೆ ದುಪ್ಪಟ್ಟು ಅಪ್ಘಾನಿ ಕೊಡುವುದಾಗಿ ಹೇಳಿ ಮೋಸ ಮಾಡುತ್ತಿದ್ದರು. ಆದರೆ ಆರೋಪಿಗಳು ಹೊಂದಿರುವ ನೋಟುಗಳ ಚಲಾವಣೆಯನ್ನು 2008 ರಲ್ಲೇ ಆ ದೇಶ ಹಿಂದಕ್ಕೆ ತೆಗೆದುಕೊಂಡಿದೆ. ಆದರೆ ಆ ನೋಟುಗಳನ್ನು ಇಟ್ಟುಕೊಂಡಿದ್ದ ಆರೋಪಿಗಳು ವಿದೇಶಿ ನಗದು ವಿನಿಮಯ ಕೇಂದ್ರದಲ್ಲಿ ಕೊಟ್ಟರೆ ದುಪ್ಪಟ್ಟು ಹಣ ಸಿಗುತ್ತದೆ ಎಂದು ಜನರ ನಂಬಿಸಿ ವಂಚಿಸಲು ಯತ್ನಿಸುತ್ತಿದರು. ಕಾರ್ಪೊರೇಷನ್ ಬಸ್ ನಿಲ್ದಾಣ ಸಮೀಪ ನೋಟುಗಳ ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ಮಾಹಿತಿ ಪಡೆದ ಹಲಸೂರು ಗೇಟ್ ಪೊಲೀಸರು ನೋಟು ಖರೀದಿಸುವ ಸೋಗಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡಿನಲ್ಲಿರುವ ಸೆಂಧಿಲ್ ಕುಮಾರ್ ಎಂಬಾತ ಈ ನೋಟುಗಳನ್ನು ತಂದುಕೊಟ್ಟಿದ ಎಂದು ಬಂಧಿತರು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಸೆಂಧಿಲ್ ಕುಮಾರ್ ಗಾಗಿ ಹುಡುಕಾಟ ಆರಂಭಿಸಿದ್ದು ಆತ ಸಿಕ್ಕ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.