ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದ್ದು ಶುಕ್ರವಾರ ಮೂವರು ಮಹಿಳೆಯರಿಂದ ದುಷ್ಕರ್ಮಿಗಳು ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸುಬ್ರಹ್ಮಣ್ಯಪುರದ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಜಯಮ್ಮ(63) ಎಂಬುವರ 80 ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಗಳು ದೋಚಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪತಿಗೆ ಚುಚ್ಚುಮದ್ದು ಕೊಡಿಸುವ ಸಲುವಾಗಿ ಜಯಮ್ಮ ಅವರು, ಕೆನರಾ ಬ್ಯಾಂಕ್ ಸಮೀಪ ವಾಸವಾಗಿದ್ದ ನರ್ಸ್ ಅವರನ್ನು ಕರೆತರಲು ಅವರ ಮನೆಗೆ ಬೆಳಗ್ಗೆ 7.30ಕ್ಕೆ ಹೋಗಿದ್ದರು.
ಈ ವೇಳೆ ಅವರನ್ನು ಹಿಂಬಾಲಿಸಿಕೊಂಡು ಹೋದ ದುಷ್ಕರ್ಮಿಯೊಬ್ಬ, ಮನೆ ಹೊರಗಡೆ ಕಾಯುತ್ತಿದ್ದ ಜಯಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಸ್ವಲ್ಪ ದೂರದಲ್ಲಿ ಕಾಯುತ್ತಿದ್ದ ತನ್ನ ಸಹಚರನ ಕಪ್ಪು ಪಲ್ಸರ್ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ಸುಬ್ರಮಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರಣ್ಯಪುರ ಸಮೀಪದ ಬಿಎಎಲ್ 9ನೇ ಬ್ಲಾಕ್ ನಲ್ಲಿ ಚಂದ್ರಕಲಾ (45) ಅವರ 40 ಗ್ರಾಂ ಚಿನ್ನದ ಸರವನ್ನು ಕಿಡಿಗೇಡಿಗಳು ಕಸಿದು ಪರಾರಿಯಾಗಿದ್ದಾರೆ. ಚಂದ್ರಕಲಾ ಅವರು ವಾಯುವಿಹಾರ ಮುಗಿಸಿ, ಮನೆ ಬಳಿ ಇರುವ ಸಾಯಿಬಾಬಾ ಮಠಕ್ಕೆ ಬೆಳಿಗ್ಗೆ 8.45ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಸರವನ್ನು ಕಸಿದುಕೊಂಡು ಕಣ್ಮರೆಯಾಗಿದ್ದಾರೆ. ಸರಗಳ್ಳರು ಯಮಹಾ ಬೈಕ್ ನಲ್ಲಿ ಬಂದಿದ್ದರು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜರಾಜೇಶ್ವರಿ ನಗರದ ಬಿಇಎಂಎಲ್ 5ನೇ ಹಂತದಲ್ಲಿ ಸಂಬಂಧಿಯೊಬ್ಬ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸುನಂದಮ್ಮ (65) ಅವರನ್ನು ಹಿಂಬಾಲಿಸಿಕೊಂಡು ಹೋದ ದುಷ್ಕರ್ಮಿಗಳು, ಅವರ 25 ಗ್ರಾಂ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಜರಾಜೇಶ್ವರಿನಗರದಲ್ಲಿ ನಡೆದಿದೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕಱಣ ದಾಖಲಾಗಿದೆ. ಗುರುವಾರ (ಜು.23) ಕೂಡಾ ನಗರದಲ್ಲಿ 3 ಸರಗಳ್ಳತನ ಹಾಗೂ ಮಾಗಡಿ ರಸ್ತೆ ತಾವರೆಕೆರೆ ಠಾಣೆ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣಗಳು ದಾಖಲಾಗಿರುವಂತೆ ವರದಿಯಾಗಿದೆ.