ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಶನಿವಾರವೂ ಮುಂದುವರೆದಿದ್ದು, ಮಂಡ್ಯ ಜಿಲ್ಲೆಯ ನಾಲ್ಕು, ತುಮಕೂರಿನ ಇಬ್ಬರು ಸೇರಿದಂತೆ 12 ರೈತರು ಸಾವಿಗೆ ಶರಣಾಗಿದ್ದಾರೆ. ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಲೋಕೇಶ್ (41) ತಮ್ಮ 5 ಎಕರೆ ಜಮೀನಿನಲ್ಲಿ ಸಾಲ ಮಾಡಿ ಬೋರ್‍ವೆಲ್ ಕೊರೆಸಿದ್ದರು. ಆದರೆ, ನೀರು ಸಿಕ್ಕಿರಲಿಲ್ಲ. ಒಟ್ಟು ರು.7 ಲಕ್ಷ ಸಾಲವಿತ್ತು. ಪತ್ನಿಗೆ ಅನಾರೋಗ್ಯವಿತ್ತು. ಈ ಎಲ್ಲ ಕಾರಣಕ್ಕೆ ನೇಣಿಗೆ ಶರಣಾಗಿದ್ದಾರೆ. ಕೊತ್ತತ್ತಿ ಗ್ರಾಮದ ಮಾದೇಗೌಡ (45) 3 ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಕಬ್ಬಿಗೆ ಬೆಲೆ ಸಿಕ್ಕಿರಲಿಲ್ಲ.
ರು.3 ಲಕ್ಷ ಸಾಲಕ್ಕೆ ಸಾಲಗಾರರ ಕಾಟ ಹೆಚ್ಚಿದ್ದರಿಂದ ನೇಣು ಬಿಗಿದುಕೊಂಡಿದ್ದಾರೆ. ನಾಗಮಂಗಲ ದ ಕಲ್ಲುದೇವನಹಳ್ಳಿಯ ಕುಮಾರ್ ಸಾಲ ಮಾಡಿ 3 ಎಕರೆಯಲ್ಲಿ ಸಾಗುವಳಿ ಮಾಡುತ್ತಿದ್ದರು. ಬೆಳೆ ನಷ್ಟದಿಂದ ಬೇಸತ್ತು ವಿಷ ಕುಡಿದಿದ್ದಾರೆ.
ಮಳವಳ್ಳಿ ತಾಲೂಕು ಸಾವಂದಿಪುರದ ಕೆಂಚೇಗೌಡರು (58) ತಮ್ಮ 30 ಗುಂಟೆ ಜಮೀನಲ್ಲಿ ಬೆಳೆದ ರೇಷ್ಮೆ ಕೈಕೊಟ್ಟಿದೆ. ಒಟ್ಟುರು.4 ಲಕ್ಷ ಸಾಲಕ್ಕೆ ಹೆದರಿ ವಿಷ ಸೇವಿಸಿದ್ದಾರೆ. ಶಿವಮೊಗ್ಗ ತಾಲೂಕಿನ ರೇಚಿಕೊಪ್ಪದ ನಾರಾಯಣಪ್ಪ (58) ಎರಡು ಎಕರೆ ಜಮೀನಲ್ಲಿ ಬೆಳೆದ ಬೆಳೆ ಕೈಗೆ ಹತ್ತಲಿಲ್ಲ. ಇವರಿಗೆರು.1.5 ಲಕ್ಷ ಸಾಲವಿತ್ತು. ನೇಣು ಬಿಗಿದುಕೊಂಡಿದ್ದಾರೆ. ಇವರು ಮಂಡಘಟ್ಟ ಗ್ರಾಪಂನಲ್ಲಿ 2 ಬಾರಿ ಸದಸ್ಯರಾಗಿದ್ದರು. ಗುಬ್ಬಿ ತಾಲೂಕಿನ ಗ್ರಾಪಂ ಮಾಜಿ ಸದಸ್ಯ ಎಂ.ಎನ್. ಕೋಟೆಯ ಕೆಂಪಣ್ಣ (45) ಕೃಷಿಗಾಗಿರು.4.5 ಲಕ್ಷ ಸಾಲ ಮಾಡಿದ್ದನ್ನು
ತೀರಿಸಲಾಗಿದೇ ನೇಣಿಗೆ ಕೊರಳೊಡ್ಡಿದ್ದಾರೆ.
ತುರುವೇಕೆರೆ ಸಮೀಪದ ನಂದಿ ಕಲ್ಕೆರೆ ಗ್ರಾಮದ ಎನ್.ಡಿ. ರಾಜಣ್ಣ ತಮ್ಮ 3 ಎಕರೆ ಜಮೀನಿನಲ್ಲಿ 2 ಬೋರ್ ಕೊರೆಸಿದ್ದು, ವಿಫಲವಾಗಿತ್ತು.ರು.3 ಲಕ್ಷ ಸಾಲಕ್ಕೆ ಹೆದರಿ ನೇಣು ಬಿಗಿದುಕೊಂಡಿದ್ದಾರೆ. ರಾಮದುರ್ಗ ತಾಲೂಕಿನ ಸೊಪ್ಪಡ್ಲ ಗ್ರಾಮದ ರೈತ ಬಾವಾಸಾಬಫಕ್ರುಸಾಬ ಯಂಡಿಗೇರಿ (50) ಒಂದು ಎಕರೆಯಲ್ಲಿ ಬೆಳೆದ ಈರುಳ್ಳಿ ಒಣಗಿತ್ತು. ಇದಕ್ಕಾಗಿರು. 1.5 ಲಕ್ಷ ಸಾಲ ಮಾಡಿದ್ದರು. ಬೇಸರದಿಂದ ನೇಣಿಗೆ ಶರಣಾಗಿದ್ದಾರೆ.
ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದ ಬಸವರಾಜ ಭೀಮಪ್ಪ ಓಲೇಕಾರ (48) ಹತ್ತಿ, ಮೆಕ್ಕೆಜೋಳ ಬೆಳೆಯುತ್ತಿದ್ದರು. ಮಳೆ ಇಲ್ಲದೆ ಬೆಳೆ ಹಾನಿಯಾಗಿತ್ತು.ರು.1.50 ಲಕ್ಷ ಬ್ಯಾಂಕ್ ಸಾಲವಿದ್ದರಿಂದ ವಿಷ ಸೇವಿಸಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ಎಲೆಹುಂಡಿ ಗ್ರಾಮದಲ್ಲಿ ರೈತ ಗುರುಸಿದ್ದ ಶೆಟ್ಟಿ )60) ಅವರು 1 ಎಕರೆ ಬಗರ್ ಹುಕು ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದರು. ರು.2 ಲಕ್ಷಕ್ಕೂ ಹೆಚ್ಚಿನ ಸಾಲಕ್ಕೆ ಹೆದರಿಗೆ ನೇಣಿಗೆ ಶರಣಾಗಿದ್ದಾರೆ. ಶ್ರೀನಿವಾಸ ಪುರದ ಐಮಣ್ಣ(40) ತಾವು ಬೆಳಿದ್ದ ಟೊಮೆಟೋ ಬೆಳೆಗೆ ಸುಕ್ತ ಬೆಲೆ ಸಿಕ್ಕಿರಲಿಲ್ಲ. ಬ್ಯಾಂಕ್ ಮತ್ತು ಪರಿಚಯಸ್ಥರಿಂದ ಪಡೆದಿದ್ದ ಸಾಲಕ್ಕೆ ಹೆದರಿ ವಷ ಸೇವಿಸಿದ್ದಾರೆ.
ಆತ್ಮಹತ್ಯೆ ಮುಚ್ಚಿಡುವ ಪ್ರಯತ್ನ?:
ಗುಂಡ್ಲುಪೇಟೆ ತಾಲೂಕಿನ ಕಣ್ಣೇಗಾಲ ಗ್ರಾಮದಲ್ಲಿ ರೈತ ಗುರುಮಲ್ಲಯ್ಯ (48) ಎಂಬುವವರು ಶನಿವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡರು. ಈ ಸಾವು ಸಾಲಬಾಧೆಗೋ, ಕೌಟುಂಬಿಕ ಕಾರಣಕ್ಕೋ ತಿಳಿದಿಲ್ಲ. ಈ ಸಂದರ್ಭದಲ್ಲೇ ಕುಟುಂಬಸ್ಥರು ತರಾತುರಿಯಲ್ಲಿ ಗುರುಮಲ್ಲಯ್ಯ ಅವರ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.